ನವದೆಹಲಿ: ನಾಲ್ಕು ತಿಂಗಳ ವಿರಾಮದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತೆ ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳನ್ನು ಅವರು ಜನರೊಂದಿಗೆ ಹಂಚಿಕೊಂಡರು.
ಚುನಾವಣೆ ಸಂದರ್ಭದಲ್ಲಿ ಮೋದಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜಕೀಯವಾಗಿ ಲಾಭ ಪಡೆಯಲು ಮೋದಿ ಕೇದಾರನಾಥಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದ್ದರು. ಇದಕ್ಕೆ ಮೋದಿ ಉತ್ತರ ನೀಡಿದ್ದು, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
“ಚುನಾವಣೆ ಸಂದರ್ಭದಲ್ಲಿ ನೀವು ಕೇದಾರನಾಥಕ್ಕೆ ಏಕೆ ತೆರಳುತ್ತೀದ್ದೀರಿ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ನಮಗೆ ನಿಮ್ಮ ಕುತೂಹಲ ಅರ್ಥವಾಗುತ್ತದೆ. ಕೇದಾರನಾಥ ದೇಗುಲ ಭೇಟಿ ನನಗೆ ಆಧ್ಯಾತ್ಮಿಕವಾದದ್ದು,” ಎಂದಿದ್ದಾರೆ ಮೋದಿ.
ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದ್ದಕ್ಕೆ ಧನ್ಯವಾದ ಹೇಳಿದ ಅವರು, “ನಾನು ಪ್ರಧಾನಿಯಾಗಿಲ್ಲ, ಜನ ನನ್ನನ್ನು ಪ್ರ್ರಧಾನಿಯಾಗಿ ಆರಿಸಿದ್ದಾರೆ. ಜನರಿಂದ ನನಗೆ ಪ್ರೇರಣೆ ಸಿಗುತ್ತದೆ. ನಾನು ಫಿಟ್ ಇಂಡಿಯಾ ಬಗ್ಗೆ ಮಾತನಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟ ಎಲ್ಲರಿಗೂ ಧನ್ಯವಾದಗಳು. ಸಂಸತ್ನಲ್ಲಿ ಈಗ ಒಟ್ಟು 78 ಮಹಿಳಾ ಸಂಸದರಿದ್ದಾರೆ ಎಂದು,” ಸಂತಸ ವ್ಯಕ್ತಪಡಿಸಿದರು.
ಫೆ.24ರಂದು ಮನ್ ಕಿ ಬಾತ್ನಲ್ಲಿ ಮಾತನಾಡಿದ್ದ ಮೋದಿ, “ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ,” ಎಂದಿದ್ದರು. ಅಂತೆಯೇ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದ ಅವರು, ಮೇ ತಿಂಗಳ ಕೊನೆಯ ಭಾನುವಾರದಂದು ಮನ್ ಕಿ ಬಾತ್ನಲ್ಲಿ ಮಾತನಾಡುವುದಾಗಿ ಹೇಳಿದ್ದರು.
ನಾಲ್ಕು ತಿಂಗಳ ವಿರಾಮದ ನಂತರ ಈ ಕಾರ್ಯಕ್ರಮವನ್ನು ಮೋದಿ ಮತ್ತೆ ಪುನರಾರಂಭಿಸಿದ್ದಾರೆ. ಈ ಬಗ್ಗೆ ಇಂದು ಟ್ವೀಟ್ ಮಾಡಿದ್ದ ಅವರು, “ನಾಲ್ಕು ತಿಂಗಳುಗಳ ನಂತರ ಮತ್ತೆ ಮನ್ ಕಿ ಬಾತ್ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. 130 ಕೋಟಿ ಭಾರತಿಯರ ಶಕ್ತಿಯನ್ನು ಸಂಭ್ರಮಿಸಬೇಕಿದೆ,” ಎಂದಿದ್ದರು.