ಬೆಂಗಳೂರು, ಜೂ. 29- ಅಧಿಕ ಬಡ್ಡಿ ಆಸೆ ತೋರಿಸಿ ಸಾವಿರಾರು ಜನರಿಗೆ ನೂರಾರು ಕೋಟಿ ವಂಚನೆ ಮಾಡಿ ಸದ್ಯ ವಿದೇಶಕ್ಕೆ ಪರಾರಿಯಾಗಿರುವ ಐಎಂಎ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ನನ್ನು ಭಾರತಕ್ಕೆ ಕರೆ ತರಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ವಿಶೇಷ ತನಿಖಾ ತಂಡ (ಎಸ್ಐಟಿ) ದುಬೈಗೆ ತೆರಳಲಿವೆ.
ಎರಡು ವಾರಗಳ ಹಿಂದೆ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದ ಮಹಮ್ಮದ್ ಮನ್ಸೂರ್ ಖಾನ್ ತನ್ನ ಮತ್ತು ತನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿದರೆ ಬೆಂಗಳೂರಿಗೆ ಬರುವುದಾಗಿ ಹೇಳಿಕೆ ನೀಡಿದ್ದ.
ಆತನಿಗೆ ಎಲ್ಲ ರೀತಿಯ ರಕ್ಷಣೆ ನೀಡಬೇಕು. ಐಎಂಎನಲ್ಲಿ ಹೂಡಿಕೆ ಮಾಡಿರುವ ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂದು ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗೃಹ ಸಚಿವ ಎಂ.ಬಿ.ಪಾಟೀಲ್ ತನಿಖಾ ತಂಡಕ್ಕೆ ನಿರ್ದೇಶನ ನೀಡಿದ್ದರು.
ಇದೀಗ ಎಸ್ಐಟಿ ಮನ್ಸೂರ್ ಖಾನ್ಗೆ ಎಲ್ಲ ರೀತಿಯ ರಕ್ಷಣೆ ನೀಡಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಆತನನ್ನು ಕರೆ ತರಲು ಒಂದೆರಡು ದಿನಗಳಲ್ಲಿ ಜಾರಿ ನಿರ್ದೇಶನಾಲಯ ಹಾಗೂ ಎಸ್ಐಟಿ ಅಧಿಕಾರಿಗಳು ದುಬೈಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿರಾರು ಕೋಟಿ ವಂಚನೆ ಮಾಡಿರುವ ಈ ಪ್ರಕರಣವನ್ನು ಕೇಂದ್ರ ಸರ್ಕಾರವು ಕೂಡ ಗಂಭೀರವಾಗಿ ಪರಿಗಣಿಸಿದೆ. ಈ ಹಿಂದೆ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದ, ಐಪಿಎಲ್ ಹಗರಣದ ರೂವಾರಿ ಲಲಿತ್ ಮೋದಿ, ಮದ್ಯದ ದೊರೆ ವಿಜಯ ಮಲ್ಯ, ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ವಂಚನೆ ಮಾಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿ, ಆತನ ಚಿಕ್ಕಪ್ಪ ಮೇಹುಲ್ ಚೋಕ್ಸಿ ಅವರನ್ನು ಕರೆ ತರಲು ರಾಜತಾಂತ್ರಿಕ ಮಾರ್ಗಗಳನ್ನೇ ಮನ್ಸೂರ್ ಖಾನ್ ಪ್ರಕರಣಗಳಲ್ಲೂ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಅನುಸರಿಸಿದೆ.
ದುಬೈನಲ್ಲಿರುವ ಭಾರತದ ಹೈ ಕಮೀಷನರ್ ಮತ್ತು ರಾಜತಾಂತ್ರಿಕ ಅಧಿಕಾರಿಗಳಿಗೆ ಈ ಪ್ರಕರಣದ ಬಗ್ಗೆ ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಭಾರತ ಮತ್ತು ದುಬೈ ನಡುವೆ ಆರೋಪಿಗಳ ಹಸ್ತಾಂತರ ಒಪ್ಪಂದ ಜಾರಿಯಲ್ಲಿರುವುದರಿಂದ ಮಹಮ್ಮದ್ ಮನ್ಸೂರ್ ಖಾನ್ ಸ್ವದೇಶಕ್ಕೆ ಬರುವುದು ಯಾವುದೇ ರೀತಿಯ ಕಾನೂನು ತೊಡಕುಗಳು ಎದುರಾಗುವುದಿಲ್ಲ ಎಂದು ತಿಳಿದು ಬಂದಿದೆ.
ಭಾರತ ಬಿಟ್ಟು ವಿದೇಶಕ್ಕೆ ಪರಾರಿಯಾಗಿದ್ದ ಮನ್ಸೂರ್ ಖಾನ್ ದುಬೈ ಹೊರ ವಲಯದ ಸಂಬಂಧಿಕರ ಮನೆಯಲ್ಲಿ ರಕ್ಷಣೆ ಪಡೆದಿದ್ದಾನೆ ಎಂದು ತಿಳಿದು ಬಂದಿದೆ. ಆತ ಅಲ್ಲಿರುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದು, ಖಾನ್ ಚಲನ-ವಲನಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.
ಮನ್ಸೂರ್ ಖಾನ್ ನಾಲ್ಕನೇ ಪತ್ನಿ ಜೊತೆ ದುಬೈನ ನಗರವೊಂದರಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯ ನೆರವನ್ನೂ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಮನ್ಸೂರ್ ಮೇಲೆ ಬ್ಲೂ ಕಾರ್ನರ್ ನೊಟೀಸ್ ಹೊರಡಿಸಲಾಗಿದ್ದು, ಆತನ ಪತ್ತೆಗೆ ಇಂಟರ್ಪೋಲ್ ನೆರವು ಸಹ ಕೇಳಲಾಗಿದೆ.
ಎಸ್ಐಟಿ ಅಧಿಕಾರಿಗಳು ಸಹ ಮನ್ಸೂರ್ ಖಾನ್ ಜಾಡು ಹಿಡಿದು ದುಬೈ ವಿಮಾನ ಹತ್ತಲು ತಯಾರಿ ನಡೆಸಿದ್ದು, ಕೆಲವೇ ದಿನಗಳಲ್ಲಿ ಆತನನ್ನು ಬೆಂಗಳೂರಿಗೆ ಕರೆತರುವ ವಿಶ್ವಾಸದಲ್ಲಿದ್ದಾರೆ.
ಮನ್ಸೂರ್ ಖಾನ್ ಐಎಂಎ ಸಂಸ್ಥೆಯ ಹೆಸರಿನಲ್ಲಿ ಸುಮಾರು 4000 ಕೋಟಿ ರೂಪಾಯಿ ಹಣವನ್ನು ಬಂಡವಾಳ ಹೂಡಿಕೆದಾರರಿಗೆ ಮೋಸ ಮಾಡಿದ್ದಾನೆ ಎನ್ನಲಾಗಿದೆ.ಆತನ 209 ಕೋಟಿ ಆಸ್ತಿಯನ್ನು ಈ ವರೆಗೆ ಜಪ್ತಿ ಮಾಡಲಾಗಿದೆ.
ಈ ಕಾಯ್ದೆಯನ್ನು ಈಗಾಗಲೇ ವಿಜಯ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿ ಸೇರಿದಂತೆ 28 ಕ್ಕೂ ಹೆಚ್ಚು ಮಂದಿ ವಿರುದ್ಧ ಈ ಕಾನೂನು ಪ್ರಯೋಗ ಮಾಡಲಾಗಿದೆ. 100 ಕೋಟಿಗೂ ಅಧಿಕ ವಂಚನೆ ಪ್ರಕರಣಗಳಿಗಾಗಿ ಇರುವ ಆರ್ಥಿಕ ಅಪರಾಧಿಗಳ ಕಾಯ್ದೆ-2018 ಕಾಯ್ದೆಯನ್ನು 2018 ರಲ್ಲಿ ಜಾರಿಗೆ ತರಲಾಯಿತು.
ಐಎಂಎ ಮಾಲೀಕ ಮನ್ಸೂರ್ ಖಾನ್ ಸಹ 100 ಕೋಟಿ ಗೂ ಅಧಿಕ ಹಣ ವಂಚನೆ ಮಾಡಿದ್ದರಿಂದ ಇಡಿ ಈ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಈ ಕಾಯ್ದೆಯಡಿ ಆರೋಪಿಯ ಆಸ್ತಿಯನ್ನು ವಶಪಡಿಸಿಕೊಂಡು ಅದನ್ನು ಸರ್ಕಾರ ಮಾರಿ ಜನರಿಗೆ ಹಣ ನೀಡುವ ಅವಕಾಶವಿದೆ.
ಪಿಎಂಎಲ್ಎ (ಪ್ರಿವೆನ್ಶನ್ ಆಫ್ ಮನಿ ಲಾಂಡ್ರಿಂಗ್) ಅಡಿಯಲ್ಲಿ ಇಡಿಯು ಐಎಂಎ ಮಾಲೀಕ ಮನ್ಸೂರ್ ಖಾನ್ ಮೇಲೆ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದೆ.
40,000 ಕ್ಕೂ ಹೆಚ್ಚು ಮಂದಿಗೆ ಮನ್ಸೂರ್ ಖಾನ್ ಮೋಸ ಮಾಡಿದ್ದಾನೆಂದು ಇಡಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಆತನ ವಿರುದ್ಧ ಎಫ್ಐಆರ್ ದಾಖಲಾಗಲ ದಿನವೇ ಆತ ದೇಶ ಬಿಟ್ಟು ಓಡಿಹೋಗಿದ್ದಾನೆ ಎನ್ನಲಾಗಿದೆ.
ಐಎಂಎಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜನರಿಂದ ಹಣ ಹಾಕಿಸಿಕೊಂಡು ಸುಮಾರು 4000 ಕೋಟಿ ರೂಪಾಯಿಯನ್ನು ವಂಚನೆ ಮಾಡಿದ್ದಾರೆ ಎಂದು ಇಡಿ ತನಿಖೆಯಿಂದ ಗೊತ್ತಾಗಿದೆ.
ಮನ್ಸೂರ್ ಖಾನ್ಗೆ ಸೇರಿದ ಎಲ್ಲ ಆಸ್ತಿಗಳನ್ನು, ಬ್ಯಾಂಕ್ ಖಾತೆಗಳನ್ನು ತನಿಖೆಗೆ ಒಳಪಡಿಸಿರುವ ಇಡಿ, ವಿವಿಧ ಬ್ಯಾಂಕ್ ಖಾತೆಗಳಿಂದ 44 ಕೋಟಿ ರೂಪಾಯಿ ಹಾಗೂ ಐಎಂಎಗೆ ಸೇರಿದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಶಿವಾಜಿನಗರದ ಐಎಂಎ ಮಳಿಗೆ, ಜಯನಗರದ ಮಳಿಗೆ, ಫ್ರೇಜರ್ಟೌನ್ನ ಮನೆ, ಬನ್ನೇರ್ಘಟ್ಟ ರಸ್ತೆಯಲ್ಲಿನ ಅಪಾರ್ಟ್ಮೆಂಟ್, ಜಯನಗರದ ಮನೆ, ಅಲೆಕ್ಸಾಂಡ್ರಿಯಾ ಸ್ಟ್ರೀಟ್ನಲ್ಲಿದ್ದ ಮಳಿಗೆ, ಟಸ್ಕರ್ ಟೌನ್ನಲ್ಲಿದ್ದ ಅಪಾರ್ಟ್ಮೆಂಟ್, ಪೊಟೇರಿ ಟೌನ್ನಲ್ಲಿನ ಮನೆ, ಎಚ್ಬಿಆರ್ ಬಡಾವಣೆಯ ಮನೆ, ಬೆನ್ಸನ್ ಟೌನ್ನಲ್ಲಿನ ಮನೆ, ಸೇಂಟ್ ಜೋನಸ್ ಚರ್ಚ್ ರಸ್ತೆಯ ಶಾಲೆ, ರಿಚರ್ಡ್ ಟೌನ್ ಬಳಿಯ ಜಾಗ, ಚಿಕ್ಕಬಳ್ಳಾಪುರದಲ್ಲಿನ ಬಡಾವಣೆ, ಮಾರುತಿ ಸೇವಾ ನಗರದಲ್ಲಿನ ಕಾಂಪ್ಲೆಕ್ಸ್, ದಾವಣಗೆರೆಯ ಐದು ಎಕರೆ ಜಾಗ, ಹಾಸನದಲ್ಲಿ ಜಮೀನು, ಹಾಸನದಲ್ಲಿನ ಸೈಟು, ದಾವಣೆಗೆರೆಯ ಇಪ್ಪತ್ತು ಗುಂಟೆ ಜಮೀನು, ಸೆರ್ಪಂಟೈನ್ ರಸ್ತೆಯಲ್ಲಿ ಜಮೀನುಗಳನ್ನು ಇಡಿ ಗುರುತಿಸಿದ್ದು ಇವುಗಳೆಲ್ಲವುದರ ಒಟ್ಟು ಮೌಲ್ಯ 197 ಕೋಟಿ ಎನ್ನಲಾಗಿದೆ.
ಜೂನ್ 14 ರಂದು ನಾನು ವಿಮಾನ ನಿಲ್ದಾಣಕ್ಕೆ ತೆರಳಿದ್ದೆ, ಶುಕ್ರವಾರವಾದ್ದರಿಂದ ವಲಸೆ ಇಲಾಖೆ ಕಾರ್ಯಾಲಯ ಮುಚ್ಚಿತ್ತು. ಹಾಗಾಗಿ ನಾನು ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ, ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಆದಷ್ಟು ಶೀಘ್ರವೇ ವಾಪಸಾಗುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾನೆ.
ತನ್ನ ಮೊಬೈಲ್ ನಂಬರನ್ನು ನಗರ ಪೊಲೀಸ್ ಕಮಿಷನರ್ ಅಲೋಕ್ಕುಮಾರ್ ಅವರಿಗೆ ನೀಡಿರುವ ಮನ್ಸೂರ್, ನಾನು ಎಲ್ಲಿಗೆ ಬರಬೇಕು ಹೇಳಿ. ಯಾರನ್ನು ಭೇಟಿ ಮಾಡಬೇಕು ಹೇಳಿ. ಬಂದು ಭೇಟಿ ಮಾಡುತ್ತೇನೆ ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾನೆ.
ಬಹುಕೋಟಿ ಐಎಂಎ ವಂಚನೆ ಪ್ರಕರಣದ ರೂವಾರಿ, ಸಂಸ್ಥೆಯ ಸ್ಥಾಪಕ ಮನ್ಸೂರ್ ಖಾನ್ ಎಲ್ಲಿದ್ದಾನೆ ಎಂಬುದು ತಿಳಿದಿದೆ. ಆದರೆ ತನಿಖಾ ದೃಷ್ಟಿಯಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ. ಒಂದು ವೇಳೆ ಆತ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿರುವಂತೆ ಕಾನೂನಿಗೆ ಶರಣಾಗುವುದಾದರೆ ಸೂಕ್ತ ರಕ್ಷಣೆ ಕೊಡಲಾಗುವುದು ಎಂದು ಎಸ್ಐಟಿ ಮುಖ್ಯಸ್ಥ ಬಿ.ಆರ್.ರವಿಕಾಂತೇಗೌಡ ಅವರು ಈಗಾಗಲೇ ತಿಳಿಸಿದ್ದಾರೆ.