ಬೆಂಗಳೂರು, ಜೂ. 29- ನಾವು ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನಗೊಂಡಿರುವ ಶಾಸಕರನ್ನು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡುವುದಿಲ್ಲ. ಅವರಾಗಿಯೇ ಕಚ್ಚಾಡಿಕೊಂಡು ಸರ್ಕಾರವನ್ನು ಪತನಗೊಳಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಪರೋಕ್ಷವಾಗಿ ಸರ್ಕಾರ ರಚನೆ ಮಾಡುವ ಸುಳಿವನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ 105ಸ್ಥಾನ ಹಾಗೂ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆದ್ದಿರುವ ನಮಗೆ ಮತದಾರರ ಆಶೀರ್ವಾದವಿದೆ. ಸರ್ಕಾರ ರಚನೆ ಮಾಡುವಷ್ಟು ಸಂಖ್ಯಾಬಲ ಇಲ್ಲದಿದ್ದರೂ, ಅಪವಿತ್ರ ಮೈತ್ರಿ ವಿರುದ್ಧ ಜನಾದೇಶ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ವಿಜಯನಗರದ ಬಂಟರ ಸಂಘದಲ್ಲಿ ಬೆಂಗಳೂರು ನಗರ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ನಾವಾಗಿಯೇ ಯಾವ ಶಾಸಕರನ್ನು ಬಿಜೆಪಿಗೆ ಆಹ್ವಾನಿಸುವುದಿಲ್ಲ. ಎರಡು ಪಕ್ಷದವರು ಕಿತ್ತಾಡಿಕೊಂಡು ಸರ್ಕಾರ ಅಸ್ಥಿರಗೊಳಿಸಿದರೆ ದೊಡ್ಡಪಕ್ಷವಾಗಿರುವ ನಾವು ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಕಾಂಗ್ರೆಸ್-ಜೆಡಿಎಸ್ ನಾಯಕರು ಹಾದಿ-ಬೀದಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಅನೇಕ ಶಾಸಕರು ಸರ್ಕಾರದಿಂದ ಹೊರಬರಲು ತುದಿಗಾಲಲ್ಲಿ ನಿಂತಿದ್ದಾರೆ. ಒಂದು ವೇಳೆ ಅವರಾಗಿ ಹೊರಬಂದು ಸರ್ಕಾರ ಬಿದ್ದರೆ ಬಿಜೆಪಿ ಹೊಣೆಯಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಲು ಸಚಿವರ ಸಿದ್ಧರಿಲ್ಲ. ಕಡೆ ಪಕ್ಷ ಬರಪೀಡಿತ ಪ್ರದೇಶಗಳಿಗೂ ಪ್ರವಾಸ ಹೋಗುವುದಿಲ್ಲ, ರಾಜ್ಯದಲ್ಲಿ ಭೀಕರ ಬರಗಾಲವಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿದೇಶಿ ಪ್ರವಾಸ ಕೈಗೊಳ್ಳುವ ಅಗತ್ಯವೇನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಅವರ ಗ್ರಾಮವಾಸ್ತವ್ಯಕ್ಕೆ ಆಗಲಿ, ವಿದೇಶಿ ಪ್ರವಾಸ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ರಾಜ್ಯದಲ್ಲಿ ಎಂತಹ ಪರಿಸ್ಥಿತಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಮನವಿ ಮಾಡಿದರು.
ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಲ್ಲೂ ನಾವು ಗೆದ್ದಿದ್ದೇವೆ 28 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಾಗ ಅನಂತಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ.ಈ ನಿಟ್ಟಿನಲ್ಲಿ ಮೂವರು ಸಂಸದರು ವಿಶೇಷ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಶೀಘ್ರವೇ ಪತನವಾಗಿ ಬಿ.ಎಸ್.ಯಡಿಯೂರಪ್ಪ ಮುಂದಾಳತ್ವದಲ್ಲಿ ಬಿಜೆಪಿ ಸರ್ಕಾರ ಶೀಘ್ರದಲ್ಲೇ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬುದು ಬಹುತೇಕರ ಒತ್ತಾಸೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ನಾವು ಅತೀ ಹೆಚ್ಚು ಸ್ಥಾನ ಗಳಿಸಿದರು. ಕೆಲವೆ ಕೆಲವು ಸ್ಥಾನಗಳ ಕೊರತೆಯಿಂದ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ, ಕಾರ್ಯಕರ್ತರ ಬಹುದಿನಗಳ ಕನಸು ಶೀಘ್ರದಲ್ಲೇ ನನಸಾಗಲಿದೆ ಎಂದು ಹೇಳಿದರು.
ಈ ಬಾರಿ ದೇಶದ ಮತದಾರರು ಸಮರ್ಥ ನಾಯಕ ಬೇಕು ಎಂಬ ಕಾರಣಕ್ಕಾಗಿ ನರೇಂದ್ರ ಮೋದಿ ಅವರಿಗೆ ಮತ ಹಾಕಿದ್ದಾರೆ. ಹಾಗಾಗಿ ಬಿಜೆಪಿ ಪ್ರಚಂಡ ಜಯ ಗಳಿಸಿ ಮತ್ತೆ ಅಧಿಕಾರಕ್ಕೆ ಬಂದಿದೆ. ಜನಾದೇಶವನ್ನು ಒಪ್ಪಿಕೊಳ್ಳದವರು ತಡಬಡಿಸುತ್ತಾ ಏನೇನೋ ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಚುನಾವಣೆಯಲ್ಲಿ ಗೆದ್ದು ದೆಹಲಿಗೆ ಹೋದಾಗ ಯಡಿಯೂರಪ್ಪನವರು ನೀವು ದೆಹಲಿಯಲ್ಲಿ ಅನಂತಕುಮಾರ್ ಸ್ಥಾನವನ್ನು ತುಂಬಬೇಕು ಎಂದು ಹೇಳಿದ್ದರು.ಈ ವರೆಗೆ ಸಂಸತ್ತಿನಲ್ಲಿ ಕರ್ನಾಟಕದ ದನಿಯಾಗಿದ್ದ ಅವರು, ನಮ್ಮೊಂದಿಗಿಲ್ಲ ಆದರೆ ರಾಜ್ಯದ ಯಾವುದೇ ವಿಷಯ ಬಂದಾಗ ನಾವು ಪಕ್ಷಾತೀತವಾಗಿ ಹೋರಾಟ ನಡೆಸಿ ರಾಜ್ಯದ ಹಿತಕಾಪಾಡುತ್ತೇವೆ ಎಂದು ವಾಗ್ದಾನ ಮಾಡಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಅಭಿವೃದ್ಧಿ ಮಾಡಲು ನಾವು ಬೇಕು. ಮತ ಹಾಕಲು ಬಿಜೆಪಿ ಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಹಾಸನಕ್ಕೆ ಕೇಂದ್ರ ಸಚಿವರಾಗಿದ್ದ ನಿತಿನ್ ಗಡ್ಕರಿಯವರು ರಸ್ತೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ನೀಡಿದ್ದಾರೆ. ಹಾಗಾದರೆ ಆ ರಸ್ತೆಯಲ್ಲಿ ನೀವೇಕೆ ಓಡಾಡುತ್ತಿರಿ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನುಮತಿ ನೀಡಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಬೆಂಗಳೂರು ಮಹಾನಗರಕ್ಕೆ ಮೆಟ್ರೊ ರೈಲು ಜಾರಿ ಮಾಡಿದ್ದು ಅನಂತಕುಮಾರ್ ಅವರು, ಹಾಗಾದರೆ ಆ ರೈಲಿನ ಉದ್ಘಾಟನೆಗೆ ಸಿದ್ದರಾಮಯ್ಯ ಯಾಕೆ ಹೋದರು.ನಿಮಗೇನಾದರು ಮಾನ, ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ರೇವಣ್ಣ ತಮ್ಮ ಮಗನನ್ನು ಗೆಲ್ಲಿಸಲು ಕೈಯಲ್ಲಿ ಲಿಂಬೆಹಣ್ಣು ಹಿಡಿದುಕೊಂಡು ಮನೆ-ಮಠ-ದೇವಸ್ಥಾನಗಳನ್ನು ಸುತ್ತಿದರು.ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟೋಪಿ ಹಾಕುವುದರ ಜತೆಗೆ ಸಿದ್ದರಾಮಯ್ಯನವರಿಗೂ ಮಕ್ಮಲ್ಟೋಪಿ ಹಾಕಿದರೆಂದು ವ್ಯಂಗ್ಯವಾಡಿದರು.
ಕಾರ್ಯಕ್ರಮದಲ್ಲಿ ವಿ.ಸೋಮಣ್ಣ, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಮಾತನಾಡಿದರು.
ಇದೇ ವೇಳೆ ಯಡಿಯೂರಪ್ಪ ಸೇರಿದಂತೆ ಬೆಂಗಳೂರಿನ ಮೂವರ ಸಂಸದರನ್ನು ಸನ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯ ಆರ್.ದೇವೇಗೌಡ, ಬಿಬಿಎಂಪಿ ಸದಸ್ಯರಾದ ಉಮೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.