ಬೆಂಗಳೂರು, ಜೂ.28-ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಮೆಟ್ರೋ ಹಾಗೂ ಸಬರ್ಬನ್ರೈಲನ್ನು ತುಮಕೂರಿನವರೆಗೂ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಎಫ್ಕೆಸಿಸಿಐನ 102ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೆಂಗಳೂರಿನ ಜೊತೆಗೆ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ತುಮಕೂರಿನಲ್ಲಿ ಏಷ್ಯಾದಲ್ಲೇ ದೊಡ್ಡದಾದ ಕೈಗಾರಿಕಾ ಪ್ರದೇಶವನ್ನು ನಿರ್ಮಿಸಲಾಗುತ್ತಿದೆ. ಸುಮಾರು 80 ಸಾವಿರ ಎಕರೆ ಇದಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿದೆ.ಅದರಲ್ಲಿ ಈಗಾಗಲೇ ಮೂರ್ನಾಲ್ಕು ಸಾವಿರ ಎಕರೆ ಅಭಿವೃದ್ಧಿ ಪಡಿಸಿ ಕೈಗಾರಿಕೆಗಳಿಗೆ ಹಸ್ತಾಂತರಿಸಲಾಗಿದೆ.
ಸುಮಾರು 105 ಕೈಗಾರಿಕೆಗಳು ಈಗಾಗಲೇ ಸ್ಥಾಪನೆಯಾಗಿವೆ. ತುಮಕೂರಿನ ಸಂಪರ್ಕ ಜಾಲವನ್ನು ಹೆಚ್ಚಿಸುವ ಸಲುವಾಗಿ ಮೆಟ್ರೋ ರೈಲು ಮತ್ತು ಸಬರ್ಬನ್ ರೈಲು ಸಂಪರ್ಕಗಳನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ನಾವು ವಿಧಾನಸೌಧದಲ್ಲಿ ರಾಜಕೀಯದ ಆಟವನ್ನೂ ಆಡುತ್ತೇವೆ, ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದೇವೆ. ಎರಡನೇ ಹಂತದ ನಗರಗಳ ಪೈಕಿ ಬಳ್ಳಾರಿಯಲ್ಲಿ ಜೀನ್ಸ್ ಬಟ್ಟೆಗಳ ತಯಾರಿಕೆ ಹೆಚ್ಚಾಗಿದೆ.ಆ ಜಿಲ್ಲೆಯಲ್ಲಿ ಜೀನ್ಸ್ ಕ್ಲಸ್ಟರ್ ಗುರುತಿಸಲಾಗಿದೆ. ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕೆಗೆ ಕ್ಲಸ್ಟರ್ ನಿರ್ಮಿಸಲಾಗುತ್ತಿದ್ದು, ಈಗಾಗಲೇ 10 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. ತುಮಕೂರಿನಲ್ಲಿ ಕ್ರೀಡಾ ಸಾಮಗ್ರಿಗಳ ಕ್ಲಸ್ಟರ್ ಮತ್ತು ಕ್ರೀಡಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಚಿಂತನೆ ನಡೆದಿದೆ.ಚಿತ್ರದುರ್ಗದಲ್ಲಿ ದೂರವಾಣಿ ಉಪಕರಣಗಳ ಕ್ಲಸ್ಟರನ್ನು ಸ್ಥಾಪಿಸಲಾಗುತ್ತಿದೆ.
ಹುಬ್ಬಳ್ಳಿ, ಧಾರವಾಡ, ಬೀದರ್ ಹೀಗೆ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕಾಭಿವೃದ್ಧಿಗೆ ಒತ್ತು ನೀಡಲಾಗಿದೆ.ರಾಜ್ಯಸರ್ಕಾರ ಕೈಗಾರಿಕೆಗಳ ಜೊತೆಗಿದೆ.
ಕೈಗಾರಿಕಾಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದೆ.ಐಟಿ-ಬಿಟಿ, ಆರೋಗ್ಯ, ಶಿಕ್ಷಣ ಹಾಗೂ ಕೈಗಾರಿಕೆ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ದೇಶದಲ್ಲೇ ನಮ್ಮದು ಮುಂಚೂಣಿ ರಾಜ್ಯ.ಐದು ವರ್ಷದಲ್ಲಿ ಕರ್ನಾಟಕ 32 ಕ್ಷೇತ್ರಗಳಲ್ಲಿ ನಂಬರ್ ಒನ್ ಎಂದು ಕೇಂದ್ರ ಸರ್ಕಾರವೇ ಗುರುತಿಸಿದೆ. ಕೈಗಾರಿಕಾ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ಶೀಘ್ರದಲ್ಲೇ 2019-2024ರ ಮತ್ತೊಂದು ಹೊಸ ಕೈಗಾರಿಕಾ ನೀತಿಯನ್ನು ಸರ್ಕಾರ ಪ್ರಕಟಿಸಲಿದೆ. ಅಲ್ಲಿ ಕೈಗಾರಿಕಾಭಿವೃದ್ಧಿಗೆ ಅಗತ್ಯವಾದ ಪ್ರೋತ್ಸಾಹ ನೀಡುವುದು ಸೇರಿದಂತೆ ಹಲವಾರು ನೆರವುಗಳನ್ನು ನೀಡಲಾಗುವುದು. ನಮ್ಮ ಮೂಲ ಉದ್ದೇಶ ಉದ್ಯೋಗಸೃಷ್ಟಿ, ಗುಣಮಟ್ಟದ ಉತ್ಪಾದನೆ ಮತ್ತು ಹೂಡಿಕೆಯ ಆಕರ್ಷಣೆಯಾಗಿದೆ ಎಂದು ಹೇಳಿದರು.
ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಕೊನೆಯ ಬಜೆಟ್ ಮಂಡಿಸಿದಾಗ ಅದರ ಗಾತ್ರ 28 ಸಾವಿರ ಕೋಟಿಯಷ್ಟಿತ್ತು.ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚಿನ ಮಂಡಿಸಿದ ಬಜೆಟ್ನ ಗಾತ್ರ 2.34 ಲಕ್ಷ ಕೋಟಿಯಷ್ಟಿದೆ. ಕರ್ನಾಟಕ ಆರ್ಥಿಕ ಶಿಸ್ತನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡು ಬಂದಿದೆ.
ದೇಶದಲ್ಲಿ 11.78ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದ್ದರೆ, ಕರ್ನಾಟಕ ಒಂದರಲ್ಲೇ 78 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ರಾಜ್ಯ ಆರ್ಥಿಕವಾಗಿ ಸಮೃದ್ಧವಾಗಿದೆ. ಹೀಗಾಗಿಯೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು 46 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಘೋಷಣೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.
ಎಫ್ಕೆಸಿಸಿಐನ ಅಧ್ಯಕ್ಷ ಸುಧಾಕರ್ಶೆಟ್ಟಿ, ಏಷ್ಯನ್ ಇಂಡಿಯಾ ಬಿಸಿನೆಸ್ ಕೌನ್ಸಿಲ್ನ ಅಧ್ಯಕ್ಷ ರಮೇಶ್ ಕೊಡಮಲ್,ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಸ್.ಸುಬ್ರಹ್ಮಣ್ಯ, ಎಫ್ಕೆಸಿಸಿನ ನಿಕಟಪೂರ್ವ ಅಧ್ಯಕ್ಷ ಕೆ.ರವಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ.ಆರ್.ಜನಾರ್ಧನ್, ನೂತನ ಹಿರಿಯ ಉಪಾಧ್ಯಕ್ಷ ಪೆರಿಕಲ್ ಎಂ.ಸುಂದರ್, ಪ್ರಧಾನಕಾರ್ಯದರ್ಶಿ ಡಾ.ಎಚ್.ಸಿ.ಪ್ರಸಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.