ಬೆಂಗಳೂರು, ಜೂ.28-ಮುನಿಸು ಮರೆತು ಮೇಯರ್ ಪಕ್ಕದ ಆಸನದಲ್ಲಿ ಕುಳಿತ ಉಪಮೇಯರ್ ಭದ್ರೇಗೌಡ.. ಇಬ್ಬರು ನೂತನ ಸದಸ್ಯರ ಪ್ರಮಾಣವಚನ.. ಅಗಲಿದ ನಾಯಕರಿಗೆ ಶ್ರದ್ಧಾಂಜಲಿ..ಇವಿಷ್ಟು ಇಂದಿನ ಪಾಲಿಕೆ ಸಭೆಯ ಹೈಲೈಟ್ಸ್.
ಉಪಮೇಯರ್ ಭದ್ರೇಗೌಡ ಪ್ರತಿನಿಧಿಸುವ ನಾಗಪುರ ವಾರ್ಡ್ನಲ್ಲಿ ನಿನ್ನೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮೇಯರ್ ಗಂಗಾಂಬಿಕೆ ಗೈರಾಗಿದ್ದರು. ಇದರಿಂದ ಮುನಿಸಿಕೊಂಡ ಭದ್ರೇಗೌಡ ಅವರು ಪಾಲಿಕೆ ಸಭೆಯಲ್ಲಿ ಮೇಯರ್ ಪಕ್ಕದ ಸೀಟ್ನಲ್ಲಿ ಕೂರಲ್ಲ ಎಂದು ಹೇಳಿದ್ದರು.
ನಿನ್ನೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಮತ್ತಿತರರು ಭದ್ರೇಗೌಡರನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬಳಿ ಕರೆದೊಯ್ದು ರಾಜೀಸಂಧಾನ ಮಾಡಿಸಿದ್ದರು. ಅಷ್ಟೇ ಅಲ್ಲ, ಮೇಯರ್ ಗಂಗಾಂಬಿಕೆ ಹಾಗೂ ಉಪಮುಖ್ಯಮಂತ್ರಿ ನಾಗಪುರ ವಾರ್ಡ್ನಲ್ಲಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಹಾಗಾಗಿ ಮುನಿಸು ಮರೆತು ಉಪಮೇಯರ್ ಎಂದಿನಂತೆ ಮೇಯರ್ ಪಕ್ಕದ ಆಸನದಲ್ಲಿ ಕುಳಿತರು.
ಸಭೆ ಆರಂಭವಾಗುತ್ತಿದ್ದಂತೆ ಇತ್ತೀಚೆಗೆ ಅಗಲಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಾದ ಗಿರೀಶ್ಕಾರ್ನಾಡ್, ಪಾಲಿಕೆ ಮಾಜಿ ಸದಸ್ಯ ಸತ್ಯನಾರಾಯಣರಾವ್(ಓಂ ನಮಃಶಿವಾಯ) ಅವರಿಗೆ ನಮನ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.
ನಂತರ ರಮೀಳಾ ಉಮಾಶಂಕರ್ ನಿಧನದಿಂದ ತೆರವಾಗಿದ್ದ ಕಾವೇರಿಪುರ ವಾರ್ಡ್ನ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನೂತನ ಸದಸ್ಯೆ ಪಲ್ಲವಿ, ಪಕ್ಷೇತರ ಸದಸ್ಯ ಏಳುಮಲೈ ನಿಧನದಿಂದ ತೆರವಾಗಿದ್ದ ಸಗಾಯ್ಪುರಂ ವಾರ್ಡ್ನ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಳನಿಯಮ್ಮ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಇಬ್ಬರು ನೂತನ ಸದಸ್ಯರಿಗೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಅಭಿನಂದಿಸಿದರು.