ಶ್ರೀನಗರ, ಜೂ.27- ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿರುವ ಗೃಹ ಸಚಿವ ಅಮಿತ್ ಶಾ ಭಯೋತ್ಪಾದಕರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಗುಡುಗಿದ್ದಾರೆ.
ಶ್ರೀನಗರದಲ್ಲಿ ಉಗ್ರಗಾಮಿಗಳ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ ಅರ್ಷದ್ ಖಾನ್ ಅವರ ನಿವಾಸಕ್ಕೆ ಇಂದು ಭೇಟಿ ನೀಡಿ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಗೃಹ ಸಚಿವರು ಸಾಂತ್ವನ ಹೇಳಿದರು.
ಉಗ್ರಗಾಮಿಗಳ ದಾಳಿಯಲ್ಲಿ ಖಾನ್ ಪ್ರಾಣಾರ್ಪಣೆ ಮಾಡಿದ್ದಾರೆ. ಇಂತಹ ಯೋಧರ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು. ಅದಕ್ಕೆ ಕೇಂದ್ರ ಸರ್ಕಾರ ಆಸ್ಪದವೂ ನೀಡುವುದಿಲ್ಲ. ಭಯೋತ್ಪಾದಕರ ವಿರುದ್ಧ ಈಗಾಗಲೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ನಿಗ್ರಹ ಕಾರ್ಯಾಚರಣೆ ಮುಂದುವರೆಯಲಿದೆ ಎಂದರು.
ಜೂ.12ರಂದು ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳ ದಾಳಿಯಲ್ಲಿ ಅರ್ಷದ್ ಖಾನ್ ಹುತಾತ್ಮರಾಗಿದ್ದರು.
ನಿನ್ನೆಯಿಂದ ಕಾಶ್ಮೀರ ಕಣಿವೆಯಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ರಾಜನಾಥ್ ಸಿಂಗ್ ಅಮರನಾಥ ಯಾತ್ರೆ ಮತ್ತು ಕಾಶ್ಮೀರ ಭದ್ರತಾ ವ್ಯವಸ್ಥೆ ಕುರಿತು ಈಗಾಗಲೇ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಸೇನಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.