ಬೆಂಗಳೂರು, ಜೂ.26- ಆರ್ಥಿಕ ನೀತಿಯನ್ನು ಸರಿಯಾಗಿ ಪಾಲಿಸದೆ ಬಿಬಿಎಂಪಿ ಮತ್ತೊಮ್ಮೆ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
ತನಗೆ ಬರುವ ಆದಾಯಕ್ಕಿಂತ ದುಪ್ಪಟ್ಟು ಕಾಮಗಾರಿಗಳಿಗೆ ಅವಕಾಶ ಕೊಡುತ್ತಿರುವುದರಿಂದ ಪಾಲಿಕೆ ದಿವಾಳಿ ಅಂಚಿಗೆ ತಲುಪುವಂತಾಗಿದೆ.
ಸಾಲದ ಮೊತ್ತ ಬಜೆಟ್‍ಗೂ ಮೀರಿದೆ.ಪಾಲಿಕೆಯ ವಾರ್ಷಿಕ ಆದಾಯ 10 ಸಾವಿರ ಕೋಟಿಯನ್ನು ಮೀರುವುದಿಲ್ಲ. ಆದರೆ, ಸಾಲದ ಹೊರೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, 18 ಸಾವಿರ ಕೋಟಿಗೂ ಮಿಗಿಲಾಗಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವುದು ಆರ್ಥಿಕ ಇಲಾಖೆ ವರದಿಯಿಂದ ಗೊತ್ತಾಗುತ್ತಿದೆ.ಪಾಲಿಕೆಯು ಗುತ್ತಿಗೆದಾರರಿಗೆ 15,428 ಕೋಟಿ ಪಾವತಿಸಬೇಕಾಗಿದೆ. ಹಣಕಾಸು ಸಂಸ್ಥೆಗೆ 706 ಕೋಟಿ ರೂ. ಸಾಲ ಪಾವತಿಸಬೇಕಾಗಿದೆ.
2011ರಿಂದ 2018ರ ವರೆಗೆ 23,502 ಕೋಟಿ ಜಾಬ್‍ಕೋಡ್‍ಗಳನ್ನು ನೀಡಲಾಗಿದೆ.ಸಾಲದ ಹೊರೆ ಹೆಚ್ಚಾಗುತ್ತಿದ್ದರೂ ಹೀಗೆ ಜಾಬ್‍ಕೋಡ್‍ಗಳನ್ನು ಮಾತ್ರ ಹೆಚ್ಚು ಮಾಡುತ್ತಲೇ ಇದೆ.ಇಷ್ಟೆಲ್ಲ ಆದರೂ ಆಡಳಿತ ಪಕ್ಷ ಏನು ಆಗೇ ಇಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದೆ.ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಪಾಲಿಕೆ ದಿವಾಳಿ ಅಂಚಿಗೆ ಹೋಗುವುದು ಶತಃಸಿದ್ಧ.
ಪಾಲಿಕೆಯಲ್ಲಿ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿಗಳನ್ನು ಹೊರತುಪಡಿಸಿ ವೇತನ, ಪಿಂಚಣಿ, ಆಡಳಿತಾತ್ಮಕ ವೆಚ್ಚಗಳು, ಹಣಕಾಸು ವೆಚ್ಚಗಳು, ಪಾಲಿಕೆಯ ಆಸ್ತಿ ಮತ್ತು ಸ್ವತ್ತುಗಳ ನಿರ್ವಹಣೆ, ಪರಿಸರ, ನಗರ ಅರಣ್ಯೀಕರಣ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಕಾರ್ಯಕ್ರಮಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳು, ಘನತ್ಯಾಜ್ಯ ನಿರ್ವಹಣೆ ಇತ್ಯಾದಿ ಕಾರ್ಯಕ್ರಮಗಳನ್ನು ಕೂಡ ಅನುಷ್ಠಾನಗೊಳಿಸಬೇಕಾಗಿದೆ.
ಪಾಲಿಕೆಯ ಹಿತದೃಷ್ಟಿಯಿಂದ ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ.ಆದರೆ, 2010-11ನೆ ಸಾಲಿನಿಂದ ಪಾಲಿಕೆಯ ಅನುಮೋದಿತ ಆಯವ್ಯಯ ಮತ್ತು ವಾಸ್ತವಿಕ ಲೆಕ್ಕಗಳನ್ನು ಅವಲೋಕಿಸಿದರೆ ಪಾಲಿಕೆಯು ಸಾಧಿಸಿರುವ ಪ್ರಗತಿ 2010-11ರಲ್ಲಿ ಶೇ.37ರಷ್ಟು ಮಾತ್ರ.
ಅದೇ ರೀತಿ 2011-12ರಲ್ಲಿ ಶೇ.43. 2012-13ರಲ್ಲಿ ಶೇ.39, 2013-14ರಲ್ಲಿ ಶೇ.36, 2014-15ರಲ್ಲಿ ಶೇ.70, 2015-16ರಲ್ಲಿ ಶೇ.97, 2016-17ರಲ್ಲಿ ಶೇ.70, 2017-18ರಲ್ಲಿ ಶೇ.73.16ರಷ್ಟು. ಆಯವ್ಯಯದಲ್ಲಿ ನಿರೀಕ್ಷಿತ ಆದಾಯ ಬರದಿದ್ದರೂ ಸಹ ವೆಚ್ಚಗಳಿಗೆ ಒದಗಿಸಿರುವ ಅನುದಾನಕ್ಕೆ ಅನುಗುಣವಾಗಿ ಜಾಬ್‍ಸಂಖ್ಯೆಯನ್ನು ಪಡೆದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಪ್ರತಿ ವರ್ಷ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‍ಗಳ ಅಂತರ ಹೆಚ್ಚಾಗುತ್ತಲೇ ಇದೆ.
ಪಾಲಿಕೆಗೆ ಹೆಚ್ಚು ಆರ್ಥಿಕ ಹೊರೆ ಉಂಟಾಗುತ್ತಿದೆ. ಅದರಂತೆ (ಪಾಲಿಕೆ ಅನುದಾನ ಮತ್ತು ಸರ್ಕಾರಿ ಅನುದಾನದಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಒಳಗೊಂಡಂತೆ) 15,428.67 ಕೋಟಿಯಷ್ಟು ಹಣ ಬಿಬಿಎಂಪಿಯಿಂದ ಗುತ್ತಿಗೆದಾರರಿಗೆ ಪಾವತಿಸಬೇಕಾಗಿದೆ. ಹೀಗೆ ಸಾಲದ ಹೊರೆ ಪಾಲಿಕೆ ಮೇಲೆ ಹೆಚ್ಚುತ್ತಲೇ ಇದೆ.
ಪ್ರತಿಕ್ರಿಯೆ: ಸಾಲದ ಸುಳಿಗೆ ಬಿಬಿಎಂಪಿ ಸಿಲುಕದಂತೆ ನೋಡಿಕೊಳ್ಳುತ್ತೇವೆ. ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿರುವ ಆದಾಯಕ್ಕಿಂತ ದುಪ್ಪಟ್ಟು ಕಾಮಗಾರಿಗೆ ಅವಕಾಶ ನೀಡಿರುವುದರಿಂದ ಸ್ವಲ್ಪ ತೊಂದರೆಯಾಗಲಿದೆ. ಆದರೆ, ಪಾಲಿಕೆಗೆ ಬರುವ ಅನುದಾನ, ಸರ್ಕಾರದಿಂದ ಬರುವ ಅನುದಾನ, ಜಾಬ್‍ಕೋಡ್‍ನಿಂದ ಬರುವ ಹಣದಿಂದ ಸರಿದೂಗಿಸಿಕೊಂಡು ಪಾಲಿಕೆಗೆ ಆರ್ಥಿಕ ಹೊರೆ ಬಾರದಂತೆ ನೋಡಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.