ಪಶ್ಚಿಮ ಬಂಗಾಳ ಬಾಂಬ್ ಸ್ಫೋಟ ಪ್ರಕರಣ: ದೊಡ್ಡಬಳ್ಳಾಪುರದಲ್ಲಿ ಉಗ್ರನ ಬಂಧ: ಬೆಂಗಳೂರು: ಪಶ್ಚಿಮ ಬಂಗಾಳದ ಬುರ್ದ್ವಾನ್ನ ಖಗ್ರಾಗಡದಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಹಬೀಬುಲ್ ರೆಹಮಾನ್ನನ್ನು ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಂಗಳವಾರ ಬೆಳಿಗ್ಗೆ ಬಂಧಿಸಿದೆ. ಬಂಧಿತ ಆರೋಪಿ ‘ಜಮಾತ್ ಉಲ್ ಮುಜಾಹಿದೀನ್, ಬಾಂಗ್ಲಾದೇಶ’ ಉಗ್ರ ಸಂಘಟನೆಯ ಸದಸ್ಯ ಎಂದು ಎನ್ಐಎ ತಿಳಿಸಿದೆ.
2014ರ ಅಕ್ಟೋಬರ್ 2ರಂದು ಖಗ್ರಾಗಡದ ಹಸನ್ ಚೌಧರಿ ಎಂಬುವವರ ನಿವಾಸದಲ್ಲಿ ಕಚ್ಚಾ ಬಾಂಬ್ ತಯಾರಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟು ಒಬ್ಬರು ಗಾಯಗೊಂಡಿದ್ದರು. ಘಟನೆ ಬಗ್ಗೆ ಆರಂಭದಲ್ಲಿ ಬುರ್ದ್ವಾನ್ ಜಿಲ್ಲಾ ಪೊಲೀಸರು ತನಿಖೆ ನಡೆಸಿದ್ದು, ನಂತರ ಪಶ್ಚಿಮ ಬಂಗಾಳ ಸಿಐಡಿಗೆ ತನಿಖೆ ನಡೆಸಿತ್ತು. ಬಳಿಕ ತನಿಖೆಯನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಿಗ್ಗೆ 10.30ರಿಂದ 11.40ರ ಅವಧಿಯಲ್ಲಿ ಕಾರ್ಯಾಚರಣೆ ನಡೆಸಿ, ದೊಡ್ಡಬಳ್ಳಾಪುರದ ಚಿಕ್ಕಪೇಟೆ ಮಸೀದಿಯಲ್ಲಿ ಅನ್ವರ್ ಹುಸೇನ್ ಇಮಾಮ್ ಎಂಬುವವರ ಆಶ್ರಯದಲ್ಲಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ. ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಕೋರ್ಟ್ಗೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಕೋಲ್ಕತ್ತದ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲು ಅನುಮತಿ ನೀಡಬೇಕು ಎಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ ಮನವಿ ಮಾಡಿದೆ.
ಬಂಧಿತನನ್ನು ಅಬಿಬುಲ್ಲಾ ರೆಹಮಾನ್(30) ಎಂದು ಗುರುತಿಸಲಾಗಿದೆ. ಬಂಧಿತ ಉಗ್ರ 2014ರಲ್ಲಿ ಬಿಹಾರದ ಬುದ್ದಗಯಾ ಸಮೀದ ನಗರದಲ್ಲಿ ಬಾಂಬ್ ತಯಾರಿಕೆ ಸಂದರ್ಭದಲ್ಲಿಯೇ ಬಾಂಬ್ ಸ್ಪೋಟಗೊಂಡು ಇಬ್ಬರು ಮೃತಪಟ್ಟು, ಸುಮಾರು 40 ಜನ ಗಾಯಗೊಂಡಿದ್ದರು. ಬಾಂಬ್ ತಯಾರಿಕೆಯಲ್ಲಿ ಭಾಗಿಯಾಗಿದ್ದ ಬಾಂಗ್ಲದೇಶದ ಅಬಿಬುಲ್ಲಾ ರೆಮಹಾನ್ ಅಂದಿನಿಂದಲು ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕಾಗಿ ಎನ್ಐಎ ತಂಡ ಸತತ ಐದು ವರ್ಷಗಳಿಂದಲು ಶೋಧನೆಯಲ್ಲಿ ತೊಡಗಿತ್ತು ಎಂದು ಪೊಲೀಸ್ ಮೂಲಗಳು ತಿಳಿವೆ.
ಎರಡೂ ಪ್ರಕರಣಗಳಲ್ಲಿ ಈತ ಬೆಕಾಗಿದ್ದಾನೆ.
ನಗರದಲ್ಲಿ ಉಗ್ರನಿಗೆ ಆಶ್ರಯ ನೀಡಿದ್ದ ಮೌಲ್ವಿ ಅನ್ವರ್ಹುಸೇನ್ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ಉಗ್ರ ಅಬಿಬುಲ್ಲಾ ರೆಹಮಾನ್ ನನ್ನು ಬೆಂಗಳೂರಿನ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲು ಅಸ್ಸಾಂ ಹಾಗೂ ಬೆಂಗಳೂರು ಎನ್ಐಎ ತಂಡದ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.