ಬೆಂಗಳೂರು, ಮಾ.27-ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ರಾಜ್ಯದ ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಆದಾಯ ತೆರಿಗೆ, ಕಸ್ಟಮ್ಸ್ ಮತ್ತು ರಿಸರ್ವ್ ಬ್ಯಾಂಕ್ ಅಧಿಕಾರಿಗಳನ್ನು ಬಳಸಿಕೊಳ್ಳುವ ಮೂಲಕ ನ್ಯಾಯಸಮ್ಮತ ಚುನಾವಣೆಗೆ ಅನುವು ಮಾಡಿಕೊಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನ ನಡೆಯುವ ಬೂತ್ಗಳಲ್ಲಿ ರಾಜ್ಯಸರ್ಕಾರಿ ಅಧಿಕಾರಿಗಳೊಂದಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಅಧಿಕಾರಿಗಳನ್ನು ಬಳಸಿಕೊಳ್ಳುವ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಬೇಕಿದೆ ಎಂದರು.
ಕಳೆದ ಮೂರು ದಿನಗಳಿಂದ ಸ್ವೇಚ್ಛಾಚಾರವಾಗಿ ಸರ್ಕಾರ ಅಧಿಕಾರಿಗಳ ವರ್ಗಾವಣೆ ಮಾಡಿದೆ. ತಮ್ಮ ಜಾತಿಯವರು, ಸಂಬಂಧಿಕರು, ಕುಟುಂಬದವರನ್ನೇ ವರ್ಗಾವಣೆ ಮಾಡಿ, ಸಾಧ್ಯವಾದಷ್ಟು ಮಟ್ಟಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ತಮಗೆ ಬೇಕಾದ ಕಡೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇವೆ ಎಂದು ಹೇಳಿದರು.
ಅಧಿಕಾರಿಗಳು ಯಾವುದೇ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವಗಳಿಗೆ ಒಳಗಾಗದೆ ಚುನಾವಣಾ ಕಾರ್ಯನಿರ್ವಹಿಸಬೇಕಿದೆ. ಸ್ವೇಚ್ಛಾಚಾರವಾಗಿ ನಡೆದಿರುವ ವರ್ಗಾವಣೆಗಳಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ನಿರ್ದೇಶನ ನೀಡಬೇಕಿದೆ. ನಾವು ಬಿಎಸ್ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಸಮಾಜವಾದಿ ಪಕ್ಷದವರು ಬಂದರೆ ಪರಿಶೀಲನೆ ನಡೆಸುತ್ತೇವೆ. ಉಳಿದ ಯಾವುದೇ ಪಕ್ಷಗಳ ಮೈತ್ರಿ ಪರಿಗಣಿಸಲು ಸಮಯವಿಲ್ಲ. ಎನ್ಸಿಪಿಯವರು ಬಂದು ಹೋಗಿದ್ದರು. ಆದರೆ ಅವರು ಮೈತ್ರಿಯನ್ನು ಮುಂದುವರೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ಮೇ 18 ರಂದು ನನ್ನ ಹುಟ್ಟುಹಬ್ಬವಿದೆ. ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಜನತೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಿದ್ದೇವೆ ಎನ್ನುವ ಮೂಲಕ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂಬ ಭವಿಷ್ಯ ನುಡಿದರು.