ಮೈತ್ರಿ ಸರ್ಕಾರಕ್ಕೆ ಖೆಡ್ಡ ತೋಡಲು ಮುಹೂರ್ತ ನಿಗದಿ

ಬೆಂಗಳೂರು, ಜೂ.24- ಕಾಂಗ್ರೆಸ್ – ಜೆಡಿಎಸ್ ನಾಯಕರು ವಿಧಾನಸಭೆ ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ತೆರೆಮರೆಯಲ್ಲಿ ಸಿದ್ದತೆ ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಷಾ ದೋಸ್ತಿ ಸರ್ಕಾರಕ್ಕೆ ಖೆಡ್ಡ ತೋಡಲು ಮುಹೂರ್ತ ನಿಗದಿಪಡಿಸಿದ್ದಾರೆ.

ಲೋಕಸಭೆ ಮುಂಗಾರು ಅಧಿವೇಶನ ಮುಗಿಯುತ್ತಿದ್ದಂತೆಯೇ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಗತ್ಯ ಸಿದ್ದತೆಗಳನ್ನು ಪ್ರಾರಂಭಿಸುವಂತೆ ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ.

ಜುಲೈ ತಿಂಗಳ ಅಂತ್ಯದೊಳಗೆ ಸರ್ಕಾರವನ್ನು ಅಸ್ಥಿರಗೊಳಿಸಿ ಆಗಸ್ಟ್ ತಿಂಗಳಿನಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುವಂತೆ ಸೂಚಿಸಿದ್ದಾರೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲೇ ಈ ಕಾರ್ಯಾಚಾರಣೆ ನಡೆಯಲಿ ಎಂದು ಅಮಿತ್ ಷಾ ಸೂಚನೆ ಕೊಟ್ಟಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೈತ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಉಂಟಾಗುತ್ತಿರುವ ದುಷ್ಟರಿಣಾಮ, ಲೋಕಸಭಾ ಚುನಾವಣೆಯಲ್ಲಿ ಉಂಟಾದ ಹೀನಾಯ ಸೋಲು, ಸರಕಾರ ಮುಂದುವರೆದರೆ ಆಗುವ ಲಾಭ-ನಷ್ಟದ ಬಗ್ಗೆ ಸವಿವರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ದೂರು ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಬೆಳವಣಿಗೆಯ ನಡುವೆ ಮಾಜಿ ಪ್ರಧಾನಿ ದೇವೇಗೌಡರು ಬಹಿರಂಗವಾಗಿ ಮಧ್ಯಂತರ ಚುನಾವಣೆಗೆ ಹೋಗುವ ಬಗ್ಗೆ ಮಾತಾಡಿದ್ದರು.ಈ ಮಧ್ಯೆ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಬಿ.ಎಸ್ ಯಡಿಯೂರಪ್ಪ ಪಡೆ, ಸರ್ಕಾರ ಕೆಡವಲು ಮುಂದಾಗಿದೆ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಹೇಗಾದರೂ ಮಾಡಿ ಕಾಂಗ್ರೆಸ್-ಜೆಡಿಎಸ್ ನಡುವೆ ಕಿತ್ತಾಟ ತಾರಕಕ್ಕೇರುವಂತೆ ಮಾಡುವುದು ಸದ್ಯದ ಯೋಜನೆ. ಬಳಿಕ ಜನ ಮೈತ್ರಿ ಸರ್ಕಾರ ಕಿತ್ತಾಟವನ್ನು ಬಹಿರಂಗವಾಗಿ ನೋಡಬೇಕು. ಈ ಬೆನ್ನಲ್ಲೇ ಚುನಾವಣೆ ನಡೆಸಬೇಕೆಂಬುದು ಅಮಿತ್ ಶಾ ತಂತ್ರ. ಇದಕ್ಕಾಗಿ ಕೇಂದ್ರ ಬಲಿಷ್ಠ ನಾಯಕರ ಮೇಲೆ ಐಟಿ ದಾಳಿ ಅಸ್ತ್ರವನ್ನು ಬಳಸಿಕೊಳ್ಳಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಮೂಲಕ ಬಲಿಷ್ಠ ನಾಯಕರನ್ನು ದುರ್ಬಲಗೊಳಿಸಿ ಸರ್ಕಾರ ಬೀಳಿಸಬಹುದು ಎಂಬುದೀಗ ಚರ್ಚಾ ಕೇಂದ್ರವಾಗಿದೆ.

ಇನ್ನು ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಮೇಲೆ ಕಣ್ಣಿಟ್ಟಿರುವ ಅಮಿತ್ ಶಾ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹತ್ತಕ್ಕಿಂತ ಹೆಚ್ಚು ಸ್ಥಾನದಲ್ಲಿ ಜಯಿಸದಂತೆ ನೋಡಿಕೊಳ್ಳಬೇಕು, ಅದಕ್ಕಾಗಿ ಬೇಕಾದ ಎಲ್ಲ ನೆರವು ನಾವು ನೀಡಲು ಸಿದ್ಧ ಎಂದು ತಿಳಿಸಿರುವುದಾಗಿ ಮೂಲಗಳು ಖಚಿತ ಪಡಿಸಿವೆ.

ಕಾಂಗ್ರೆಸ್ ಕಡೆಯಿಂದ ಸಿದ್ದರಾಮಯ್ಯ ಮತ್ತು ಬೆಂಬಲಿಗರನ್ನು ತಟಸ್ಥರಾಗಿರುವಂತೆ ನೋಡಿಕೊಳ್ಳುವುದು, ಕೆಲವರನ್ನು ಐಟಿ, ಇಡಿ ಮೂಲಕ ಕಟ್ಟಿ ಹಾಕುವುದು ಯೋಜನೆಯ ಭಾಗವಾಗಿದೆ. ಮುಖ್ಯವಾಗಿ ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಗೆ ಭಾರೀ ಹೊಡೆತ ನೀಡಲು ಸ್ಕೆಚ್ ರೆಡಿಯಾಗಿದೆ.

ಎಲ್ಲವೂ ಅಂದುಕೊಂಡಂತೆಯೇ ಸಾಗಿದರೆ ಅಮಿತ್ ಶಾ ಸೂಚನೆಯಂತೆ ಜುಲೈ 31ನೇ ತಾರೀಕಿನೊಳಗೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರಕ್ಕೆ ಖೆಡ್ಡ ತೋಡಲು ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.

ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತವನ್ನು ತಂದು, ಈ ವರ್ಷದ ಡಿಸೆಂಬರ್ ನೊಳಗೆ ಚುನಾವಣೆ ನಡೆಸಬೇಕು ಎಂಬುದು ಸದ್ಯಕ್ಕೆ ಬಿಜೆಪಿ ವರಿಷ್ಠರ ಲೆಕ್ಕಾಚಾರ. ಅದಕ್ಕೂ ಮುನ್ನ ಕಾಂಗ್ರೆಸ್- ಜೆಡಿಎಸ್ ನ ಪ್ರಮುಖ ನಾಯಕರು ಕೆಲವರು ಬಿಜೆಪಿ ಸೇರುವುದು ಖಾತ್ರಿ ಆಗಿದೆ. ಈಗಾಗಲೇ ಬಿಜೆಪಿ ಸೇರಲು ಸಿದ್ಧರಾಗಿರುವವರಿಗೆ ಸ್ವಲ್ಪ ಕಾಲ ಕಾಯುವಂತೆ ತಿಳಿಸಲಾಗಿದೆ.

ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳು ತಾವಾಗಿಯೇ ಕಿತ್ತಾಡುವುದು ಜನರು ನೋಡುವಂತಾಗಬೇಕು. ಎರಡೂ ಪಕ್ಷಗಳ ಬಗ್ಗೆ ಹೇವರಿಕೆ ಹುಟ್ಟಿದ ಮೇಲೆ ಈ ಸರಕಾರವನ್ನು ಬೀಳಿಸಿ, ಆ ನಂತರ ರಾಷ್ಟ್ರಪತಿ ಆಡಳಿತವನ್ನು ಹೇರಿ, ಕೆಲ ತಿಂಗಳಲ್ಲಿ ಚುನಾವಣೆಗೆ ಹೋದರೆ ಬಿಜೆಪಿಗೆ ಅನುಕೂಲ ಆಗಲಿದೆ ಎಂಬುದು ಲೆಕ್ಕಾಚಾರ.

ಈ ಮಧ್ಯೆ ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಕೂಡ ಬಹುತೇಕ ಪಕ್ಕಾ ಆಗಿದೆ. ದಲಿತ ನಾಯಕರೊಬ್ಬರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತರುವ ಹಾಗೂ ಮುಂದೆ ಅವರನ್ನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲು ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದ್ದು, ಇದಕ್ಕೆ ಸ್ಥಳೀಯ ಮಟ್ಟದಲ್ಲಿ ಆರೆಸ್ಸೆಸ್ ನಾಯಕರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಆಗಲಿ ಎಂಬುದೇ ಬಿಜೆಪಿ ಹೈ ಕಮಾಂಡ್ ನಿರೀಕ್ಷೆಯಾದ್ದರಿಂದ ನಾಯಕತ್ವದಲ್ಲಿ ತಕ್ಷಣಕ್ಕೆ ಬದಲಾವಣೆ ಮಾಡುವುದು ಬೇಡ ಎಂಬ ಸಲಹೆ ಬಂದಿದೆ. ಒಂದು ವೇಳೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂದಾದರೆ ಲಿಂಗಾಯತ ಸಮಾಜದ ಮತಗಳು ಬಿಜೆಪಿಗೆ ಬಾರದಿರುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕೆ ನಾಯಕತ್ವ ಬದಲಾವಣೆ ಸದ್ಯಕ್ಕೆ ಇಲ್ಲ ಎಂಬ ಸಂದೇಶ ರವಾನಿಸಲಾಗಿದೆ.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಆಗಲಿದೆ. ಈಗಲೇ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಯಡಿಯೂರಪ್ಪನವರನ್ನು ಕೆಳಗಿಳಿಸಿದರೆ, ಲಿಂಗಾಯತ ಸಮುದಾಯ ಮತಗಳು ಚದುರಿ ಹೋಗಲಿವೆ. ಹಾಗಾಗಿ ಸದ್ಯ ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಬೇಡ ಎಂಬುದು ಹೈಕಮಾಂಡ್ ಲೆಕ್ಕಾಚಾರ.

ಇನ್ನು ಬಿಜೆಪಿ ಸೇರಲು ಸಿದ್ದರಾಗಿರುವ ಕಾಂಗ್ರೆಸ್-ಜೆಡಿಎಸ್ ಅತೃಪ್ತರಿಗೆ ಒಂದಷ್ಟು ದಿನ ಕಾಯುವಂತೆ ಸೂಚಿಸಲಾಗಿದೆ. ಎಲ್ಲವೂ ಅಂದುಕೊಂಡತೆ ಆದಲ್ಲಿ, ಡಿಸೆಂಬರ್ ಅಂತ್ಯಕ್ಕೆ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗುವುದು. ಬಳಿಕ ರಾಜ್ಯದಲ್ಲಿ ಮತ್ತೊಮ್ಮೆ ವಿಧಾನಸಭೆ ನಡೆಸಲಾಗುವುದು ಎಂದು ಅಮಿತ್ ಶಾ ಚಿಂತಿಸಿದ್ಧಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ