ಮಧ್ಯಂತರ ಚುನಾವಣೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ-ಮುರಳೀಧರ್ ರಾವ್

ಬೆಂಗಳೂರು, ಜೂ.22- ಆಡಳಿತದಲ್ಲಿರುವ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರವನ್ನು ಕಿತ್ತೆಸೆದು ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಮುಂದಿರುವ ಏಕೈಕ ಗುರಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‍ರಾವ್ ಹೇಳಿದ್ದಾರೆ.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಜನರಿಂದ ಸಂಪೂರ್ಣವಾಗಿ ತಿರಸ್ಕøತಗೊಂಡಿರುವ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿವೆ. ಈ ಸರ್ಕಾರವನ್ನು ಕಿತ್ತೆಸೆದು ಬಿಜೆಪಿಯನ್ನು ಭದ್ರವಾಗಿ ಬೇರೂರುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶ ಎಂದರು.

ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟು ಬೇಗ ಈ ಮೈತ್ರಿ ಸರ್ಕಾರ ಅಧಿಕಾರದಿಂದ ತೊಲಗುತ್ತದೆಯೋ ಎಂಬುದನ್ನು ರಾಜ್ಯದ ಜನತೆ ಎದುರು ನೋಡುತ್ತಿದ್ದಾರೆ. ಎರಡೂ ಪಕ್ಷಗಳು ಆದಷ್ಟು ಬೇಗ ಮನೆಗೆ ಹೋದರೆ ಅಷ್ಟು ಬೇಗ ಕರ್ನಾಟಕದ ಭವಿಷ್ಯ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು.

ಆಡಳಿತ ನಡೆಸಲು ಸಾಧ್ಯವಾಗದೆ ಇರುವವರು ಮಧ್ಯಂತರ ಚುನಾವಣೆಯ ಗುಮ್ಮವನ್ನು ಬಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ. ನಿಮಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ 105 ಶಾಸಕರನ್ನು ಹೊಂದಿರುವ ನಾವು ಸರ್ಕಾರ ರಚನೆ ಮಾಡುತ್ತೇವೆಂದು ಘೋಷಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಮಧ್ಯಂತರ ಚುನಾವಣೆಗೆ ಒಪ್ಪುವುದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ಲೋಕಸಭೆ ಚುನಾವಣೆಯಲ್ಲೂ ಜನತೆ ಸಾರಾಸಗಟಾಗಿ ತಿರಸ್ಕರಿಸಿದ್ದಾರೆಂದು ವಾಗ್ದಾಳಿ ನಡೆಸಿದರು.

ಯಾವ ಪೆÇಲೀಸ್ ಅಧಿಕಾರಿಯನ್ನು ಲಾಟರಿ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಸೇವೆಯಿಂದ ಅಮಾನತು ಮಾಡಲಾಗಿತ್ತೋ ಅಂತಹವರಿಗೆ ಮುಂಬಡ್ತಿ ನೀಡಿ ಪ್ರತಿಷ್ಠಿತ ಬೆಂಗಳೂರು ನಗರ ಹುದ್ದೆ ನೀಡಲಾಗಿದೆ. ಭ್ರಷ್ಟರಿಗೆ ಈ ಸರ್ಕಾರ ಕೊಟ್ಟ ಬಳುವಳಿ ಎಂದು ಪರೋಕ್ಷವಾಗಿ ಅಲೋಕ್‍ಕುಮಾರ್ ಹೆಸರು ಹೇಳದೆ ಮುರಳೀಧರ್ ರಾವ್ ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಡೈರಿ ಪ್ರಕರಣ ಇನ್ನೂ ಮುಗಿದಿಲ್ಲ. ಸರ್ಕಾರದಲ್ಲಿ ಇನ್ನೂ ಅನೇಕ ಭ್ರಷ್ಟಾಚಾರ ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿವೆ. ಇದೆಲ್ಲದರ ವಿರುದ್ಧ ನಾವು ಹೋರಾಟ ರೂಪಿಸುತ್ತಿದ್ದೇವೆ ಎಂದು ಹೇಳಿದರು.

ಸರ್ಕಾರ ಹೆಚ್ಚು ದಿನ ಉಳಿಯಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಯಾವ ಕಾರಣಕ್ಕೂ ಈ ಸರ್ಕಾರ ಹೆಚ್ಚುದಿನ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ. ಯಾವುದೇ ಸಂದರ್ಭದಲ್ಲಿ ಏನು ಬೇಕಾದರೂ ನಡೆಯಬಹುದು. ನಾವು ಸಹನೆಯಿಂದ ಕಾಯೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದಿದ್ದರೆ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮರುಕ್ಷಣವೇ ರಾಜೀನಾಮೆ ನೀಡಿ ಮನೆಗೆ ಹೋಗಬೇಕಿತ್ತು.

ಎಲ್ಲವನ್ನೂ ಬಿಟ್ಟವರು ಇಂದು ಆಡಳಿತ ನಡೆಸುತ್ತಿದ್ದಾರೆ. ಇದು ಈ ರಾಜ್ಯದ ದುರಂತ ಎಂದು ವ್ಯಂಗ್ಯವಾಡಿದರು.

ಮಗ ಗ್ರಾಮ ವಾಸ್ತವ್ಯಕ್ಕೆ ಹೋದರೆ, ಅಪ್ಪ ಮಧ್ಯಂತರ ಚುನಾವಣೆಗೆ ಹೋಗೋಣ ಎನ್ನುತ್ತಾರೆ. ಸಮ್ಮಿಶ್ರ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದು ಸ್ವತಃ ಕುಮಾರಸ್ವಾಮಿಯವರಿಗೇ ಗೊತ್ತಿಲ್ಲ ಎಂದು ಹರಿಹಾಯ್ದರು.

ಒಂದು ವರ್ಷದ ಸಾಧನೆಯ ಪುಸ್ತಕವನ್ನು ನೋಡಿದೆ. ಅದರಲ್ಲಿ ಹೇಳಿಕೊಳ್ಳುವಂತಹ ಯಾವ ಸಾಧನೆಯೂ ಇಲ್ಲ. ಸುಳ್ಳು ಭರವಸೆಗಳ, ಅಂತೆ-ಕಂತೆಗಳ ಪುರಾಣವನ್ನೇ ಹೇಳಲಾಗಿದೆ. ಒಂದು ವರ್ಷದಲ್ಲಿ ನೀವು ಏನು ಸಾಧನೆ ಮಾಡಿ ಜನತೆ ಮುಂದೆ ಹೋಗಿದ್ದೀರಿ ಎಂದು ಪ್ರಶ್ನಿಸಿದರು.

ಗ್ರಾಮ ವಾಸ್ತವ್ಯ ಮಾಡಿದರೆ ಜನತೆಗೆ ಯಾವುದೇ ಪ್ರಯೋಜನವಿಲ್ಲ. ಜನತೆ ಬರಗಾಲದಿಂದ ತತ್ತರಿಸುತ್ತಿದ್ದಾರೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸುವ ಬದಲು ಇಂತಹ ನಾಟಕ ಮಾಡುವುದನ್ನು ಕುಮಾರಸ್ವಾಮಿ ನಿಲ್ಲಿಸಲಿ.ಶೇ.90ರಷ್ಟು ಜನರು ಸಮ್ಮಿಶ್ರ ಸರ್ಕಾರ ತೊಲಗಬೇಕೆಂದು ಹೇಳುತ್ತಿರುವುದಾಗಿ ತಿಳಿಸಿದರು.

ನಿಮಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ. ನಾವು 105 ಶಾಸಕರಿದ್ದೇವೆ. ನಿಮ್ಮ ಕೈಲಿ ಆಗದಿದ್ದರೆ ಸರ್ಕಾರ ರಚನೆ ಮಾಡಲು ಸಿದ್ಧ.ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜುಲೈ 6 ರಿಂದ ಆಗಸ್ಟ್ 11ರ ವರೆಗೆ ಸದಸ್ಯತ್ವ ಅಭಿಯಾನ ರಾಜ್ಯಾದ್ಯಂತ ನಡೆಯಲಿದೆ. ಈ ಬಾರಿ ಸುಮಾರು 50 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ, ಸದಸ್ಯತ್ವ ನೋಂದಣಿ ಅಭಿಯಾನದ ಉಸ್ತುವಾರಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಸಹ ಉಸ್ತುವಾರಿ ಜಗದೀಶ್ ಹಿರೇಮಣಿ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ