ಕಾಂಗ್ರೇಸ್ ವಿರುದ್ಧ ಕಿಡಿ ಕಾರಿದ ಎಚ್.ವಿಶ್ವನಾಥ್

ಬೆಂಗಳೂರು,ಜೂ.22-ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಲು ಸಾಧ್ಯವಾಗದಿದ್ದರೆ ಬೆಂಬಲ ವಾಪಸ್ ಪಡೆದುಕೊಂಡು ಹೋಗಿ ಎಂದು ಜೆಡಿಎಸ್‍ನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ದಿನಕ್ಕೊಬ್ಬರಂತೆ ಮೈತ್ರಿ ಸರ್ಕಾರದ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ. ಜೊತೆಯಲ್ಲಿ ಇರುವುದಾದರೆ ಸುಮ್ಮನಿರಿ. ಇರಲಾಗದಿದ್ದರೆ ಬೆಂಬಲ ವಾಪಸ್ ಪಡೆದುಕೊಂಡು ಹೋಗಿ ದಿನಕ್ಕೊಂದು ರೀತಿ ಹೇಳಿಕೆ ನೀಡಬೇಡಿ ಎಂದು ಹರಿಹಾಯ್ದಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿನ್ನೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಅದಕ್ಕೆ ಕಾಂಗ್ರೆಸ್ ಶಾಸಕರಾದ ಮುನಿರತ್ನ, ಎಸ್.ಟಿ.ಸೋಮಶೇಖರ್ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರಿಗೇ ಮೈತ್ರಿ ಬೇಡ ಎಂದಮೇಲೆ ನಾವು ಜೊತೆಯಲ್ಲಿ ಇರುವುದಾದರೂ ಏಕೆ ಎಂದು ಪ್ರಶ್ನೆಯನ್ನು ಮುಂದಿಟ್ಟಿದ್ದರು.

ಇಂದು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸಿಗ ವೀರಪ್ಪ ಮೊಯ್ಲಿ ಅವರು ದೇವೇಗೌಡರು ಬೆಳಗ್ಗೆಯೊಂದು ಸಂಜೆಯೊಂದು ಮಾತನಾಡುತ್ತಾರೆ. ಆದರೆ ಕಾಂಗ್ರೆಸ್‍ನವರು ಆ ರೀತಿ ಮಾತನಾಡಲಾಗುವುದಿಲ್ಲ ಎಂದು ಹೇಳಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಶ್ವನಾಥ್ , ಕಾಂಗ್ರೆಸ್‍ನವರ ವಿರುದ್ಧ ಕಿಡಿಕಾರಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದರಿಂದಲೇ ಲೋಕಸಭೆಯಲ್ಲಿ ಹೀನಾಯ ಸೋಲು ಕಾಣುವಂತಾಯಿತು. ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೆ ಜೆಡಿಎಸ್ ನಾಲ್ಕರಿಂದ ಐದು ಕಾಂಗ್ರೆಸ್ 8ರಿಂದ 10 ಸ್ಥಾನ ಗೆಲ್ಲಲು ಸಾಧ್ಯವಿತ್ತು. ಸಾಧಕ-ಬಾಧಕಗಳನ್ನು ಚರ್ಚಿಸದೆ ಏಕಾಏಕಿ ಮೈತ್ರಿ ಮಾಡಿಕೊಳ್ಳಲಾಯಿತು.ನಮ್ಮಿಂದ ಅವರು, ಅವರಿಂದ ನಾವು ಸೋತೆವು ಎನ್ನುವುದಕ್ಕಿಂತಲೂ ಆತುರದ ನಿರ್ಧಾರದಿಂದ ಹಿನ್ನಡೆ ಅನುಭವಿಸಿದ್ದೇವೆ ಎಂದು ಹೇಳಿದರು.

ಮೈತ್ರಿ ಸರ್ಕಾರದಲ್ಲಿ ಹೆಚ್ಚು ಅಧಿಕಾರ ಅನುಭವಿಸುತ್ತಿರುವುದು ಕಾಂಗ್ರೆಸಿನವರು. ಶೇ.70ರಷ್ಟು ನಿಗಮಮಂಡಳಿ ಅಧಿಕಾರಗಳು ಕಾಂಗ್ರೆಸ್ ಬಳಿ ಇವೆ. ಆದರೂ ಕಾಂಗ್ರೆಸಿಗರೇ ನಮಗೆ ವಿಷ ಕುಡಿಯುವ ಸ್ಥಿತಿ ಇದೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವೇಗೌಡರ ಬಗ್ಗೆ ವೀರಪ್ಪ ಮೊಯ್ಲಿ ಅವರು ಹಗುರವಾಗಿ ಮಾತನಾಡಬಾರದು. ಮೊಯ್ಲಿಗಿಂತ ದೇವೇಗೌಡರು ಹಿರಿಯರು. ಗೌಡರಿಗೆ ಯಾವಾಗ, ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕೆಂಬುದು ಚೆನ್ನಾಗಿ ಗೊತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ