ಬೆಂಗಳೂರು,ಜೂ.21- ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುವ ಹಾಗೂ ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಣಿಗೊಳಿಸುವ ಉದ್ದೇಶದಿಂದ ಜೆಡಿಎಸ್ ಇಂದು 2018-19ರ ಸಾರ್ವತ್ರಿಕ ವಿಧಾನಸಭೆ, ಲೋಕಸಭೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಂತಹ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಾಯಿತು.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಯಿತು.
ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದರೂ ನಂತರ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಮಾಧಾನಕರ ಫಲಿತಾಂಶ ಬಂದಿದೆ.
2018ರ ಚುನಾವಣೆಯಲ್ಲಿ ಇದೇ ರೀತಿ ಫಲಿತಾಂಶ ಬಂದಿತ್ತು. ಒಟ್ಟಾರೆ ಪಕ್ಷಕ್ಕೆ 3ನೇ ಸ್ಥಾನ ತಂದುಕೊಟ್ಟರೂ ಸ್ಥಳೀಯ ಮಟ್ಟದಲ್ಲಿ ಪಕ್ಷ ಸುಭದ್ರವಾಗಿದೆ. ಮತ್ತೆ ಆರು ತಿಂಗಳಲ್ಲಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಲಿದ್ದು, ಆ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಬೇಕು, ಜತೆಗೆ ಸಂಘಟನೆಯ ಅಗತ್ಯವಿದೆ.
ಸೋತವರು ವಿಚಲಿತರಾಗಬೇಕಿಲ್ಲ. ಸೋಲು-ಗೆಲುವು ಇದ್ದದ್ದೆ. ಪಕ್ಷ ಸಂಘಟನೆಯತ್ತ ಗಮನಹರಿಸಿ.ಜನ ಸಾಮಾನ್ಯರ ಆಶೋತ್ತರಗಳಿಗೆ ಪ್ರಾದೇಶಿಕ ಪಕ್ಷವಾಗಿ ಸ್ಪಂದಿಸುವ ರೀತಿ ಕೆಲಸ ಮಾಡಬೇಕಿದೆ.
ನೆಲ-ಜಲ ಸಂರಕ್ಷಣೆಗೆ ಜೆಡಿಎಸ್ ಸದಾ ಬದ್ಧವಾಗಿದೆ. ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ ತಮಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಸಿಗಲಿದೆ. ಸೋತವೆಂಬ ನಿರಾಸೆ ಬಿಟ್ಟು ಪಕ್ಷದ ಕೆಲಸದಲ್ಲಿ ತೊಡಗಿ ಎಂದು ವರಿಷ್ಠರು ಭರವಸೆ ನೀಡಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಶಾಸಕರಾದ ಅಶ್ವಿನ್ಕುಮಾರ್, ಗೋಪಾಲಯ್ಯ, ದೇವಾನಂದ ಚವ್ಹಾಣ್, ವಿಧಾನಪರಿಷತ್ ಸದಸ್ಯ ರಮೇಶ್ಬಾಬು, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ, ಮಾಜಿ ಶಾಸಕಿ ಶಾರದ ಪೂರ್ಯನಾಯಕ್, ರಾಜಣ್ಣ, ಬಚ್ಚೇಗೌಡ, ಮುಖಂಡರಾದ ಹರೀಶ್, ಶೀಲಾ ನಾಯಕ್, ಅಮರ್ನಾಥ್, ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಪಾಲ್ಗೊಂಡಿದ್ದರು.