ಬೆಂಗಳೂರು,ಜೂ.20- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ನಮ್ಮಿಂದ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು, ವಿಧಾನಸಭೆ ಮಧ್ಯಂತರ ಚುನಾವಣೆ ಬಗ್ಗೆ ಪ್ರಸ್ತಾಪ ಮಾಡಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪುರಸಭೆ, ನಗರಸಭೆ, ಪಟ್ಟಣ್ಣ ಪಂಚಾಯ್ತಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಎದುರಾಗಲಿರುವ ಚುನಾವಣೆಗೆ ಸಿದ್ದವಾಗುವಂತೆ ಪ್ರಸ್ತಾಪ ಮಾಡಿರುವುದಾಗಿ ಹೇಳಿದ್ದೆ. ಆದರೆ, ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದು ಹೇಳಿಲ್ಲ ಎಂದರು.
ತಾವು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಬೇಕು ಎಂದು ಹೇಳಿದ್ದೇನೆ. ಮೈತ್ರಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದ ರೀತಿ ಯಾರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದ್ದೆ. ಅದನ್ನು ಹೊರತುಪಡಿಸಿದರೆ ರಾಜಕೀಯ ವಿದ್ಯಮಾನಗಳಾಗಲಿ, ಚುನಾವಣೆಯಲ್ಲಿ ಸೋಲು-ಗೆಲುವಿನ ವಿಚಾರವಾಗಲಿ, ಮೈತ್ರಿ ಸರ್ಕಾರದ ಕುರಿತಂತಾಗಲಿ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಯಾರೊಂದಿಗೂ ಮಾತುಕತೆ ನಡೆಸಿಲ್ಲ. ಮೈತ್ರಿ ಸರ್ಕಾರ ಮುಂದುವರೆಸಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗಲಿದೆ ಎಂಬ ವಿಚಾರ ಮಾಧ್ಯಮದಲ್ಲಿ ಬಂದಿದೆ. ಆ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಿವುದಿಲ್ಲ ಎಂದರು.
ಸಿದ್ದರಾಮಯ್ಯನವರ ಸಲಹೆ ಮೇರೆಗೆ ನಮ್ಮ ಪಕ್ಷದ ಒಂದು ಸಚಿವ ಸ್ಥಾನವನ್ನು ಪಕ್ಷೇತರ ಶಾಸಕರಿಗೆ ನೀಡಲಾಗಿದೆ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ ಯಾವುದೇ ಪಕ್ಷಕ್ಕೆ ಬಹುಮತ ಬರದೆ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್ ನಾಯಕರೇ ಮೈತ್ರಿ ಸರ್ಕಾರಕ್ಕೆ ಮುಂದಾಗಿದ್ದರು. ಸೋನಿಯಾ ಗಾಂಧಿ ಸೂಚನೆ ಮೇರೆಗೆ ತಮ್ಮೊಂದಿಗೆ ಸಮಾಲೋಚನೆ ನಡೆಸಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಖರ್ಗೆ ಅವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದೆ. ಆದರೆ ಕಾಂಗ್ರೆಸ್ ನಾಯಕರೇ ಕುಮಾರಸ್ವಾಮಿ ಸಿಎಂ ಆಗಬೇಕೆಂಬ ಸಲಹೆ ನೀಡಿದ್ದರು. ಅದರಂತೆ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದರು.
ಸಮ್ಮಿಶ್ರ ಸರ್ಕಾರ ಮುಂದುವರೆಯುವುದು ಬೇಡ ಅದರಿಂದ ಕಾಂಗ್ರೆಸ್‍ಗೆ ಧಕ್ಕೆಯಾಗಲಿದೆ ಎಂಬ ಮಾಹಿತಿ ಬಗ್ಗೆ ಸುದ್ದಿಗಾರರು ಹೇಳಿದಾಗ ಅವರು ಮೇಲಿನಂತೆ ಪ್ರತಿಕ್ರಿಯಿಸಿದರು.
ಸೋತವರ ಸಭೆ:
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದವರನ್ನು ಕರೆದು ಸನ್ಮಾನಿಸಲಾಗಿದೆ. ಸೋತವರನ್ನು ಕಡೆಗಣಿಸಲಾಯಿತು ಎಂಬ ಅಸಮಾಧಾನ ಬರಬಾರದು ಎಂಬ ಕಾರಣಕ್ಕೆ ನಾಳೆ ನಗರಸ್ಥಳೀಯ ಸಂಸ್ಥೆಗಳಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಭ್ಯರ್ಥಿಗಳನ್ನು ಕರೆದು ಗೌರವಿಸಲಾಗುವುದು.
ರಾಜಕೀಯ ಬೆಳವಣಿಗೆ ಹಾಗೂ ಸರ್ಕಾರದ ವಿಚಾರ ಏನೇ ಇದ್ದರೂ ಆ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ. ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.40ರಷ್ಟು ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಮುಸ್ಲಿಂ ಸಮುದಾಯದವರು ಚುನಾಯಿತರಾಗಿದ್ದಾರೆ. ಸತ್ಯಾಂಶವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ತಾವು ಆ ಸಮುದಾಯಕ್ಕೆ ಏನು ಮಾಡಿದ್ದೇವೆ ಎಂದು ಪ್ರಶ್ನಿಸಿದರು.
ವಿನೂತನ ಗ್ರಾಮವಾಸ್ತವ್ಯ:
ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆಯಿಂದ ವಿನೂತನ ರೀತಿಯಲ್ಲಿ ಗ್ರಾಮವಾಸ್ತವ್ಯ ಆರಂಭಿಸಲಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಅಹವಾಲುಗಳನ್ನು ಆಹ್ವಾನಿಸಲಿದ್ದಾರೆ.
ತಮಿಳುನಾಡಿನಲ್ಲಿ ಕಾಮರಾಜ ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂಬ ತಾರತಮ್ಯ ಬೇಡ. ಎಲ್ಲ ಜಿಲ್ಲೆಗಳಲ್ಲೂ ಗ್ರಾಮವಾಸ್ತವ್ಯ ಮಾಡುವಂತೆ ಸಲಹೆ ಮಾಡಿರುವುದಾಗಿ ಗೌಡರು ತಿಳಿಸಿದರು.
ವಿಶ್ವನಾಥ್ ಮನವೊಲಿಕೆ ಪ್ರಯತ್ನ ಮಾಡುವೆ:
ಜೆಡಿಎಸ್ ರಾಜ್ಯಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂದಕ್ಕೆ ಪಡೆದು ಆ ಸ್ಥಾನದಲ್ಲಿ ಮುಂದುವರೆಯುವಂತೆ ಶಾಸಕ ವಿಶ್ವನಾಥ್ ಅವರ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ಇದೇ ವೇಳೆ ಎಚ್.ಡಿ.ದೇವೇಗೌಡ ತಿಳಿಸಿದರು.
ಒಂದೇ ಚುನಾವಣೆ ಗೊಂದಲಕ್ಕೆ ಅವಕಾಶ:
ಒಂದು ರಾಷ್ಟ್ರ, ಒಂದೇ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿರುವ ಪ್ರಾದೇಶಿಕ ಪಕ್ಷಗಳು ಈ ಬಗ್ಗೆ ದ್ವಂದ್ವ ನಿಲುವನ್ನು ಹೊಂದಿವೆ. ಒಂದು ಮತಗಟ್ಟೆಯಲ್ಲಿ ಎರಡು ಮತಯಂತ್ರಗಳಿದ್ದರೆ ಗೊಂದಲಕ್ಕೆ ಅವಕಾಶವಿರುತ್ತದೆ ಎಂದರು.
2ನೇ ಅವಧಿಗೆ ಮೋದಿ ಆಡಳಿತ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚೆಗಷ್ಟೇ ನೀತಿ ಆಯೋಗದ ಸಭೆ ನಡೆಸಿ ಆದ್ಯತಾ ವಲಯಗಳನ್ನು ಪ್ರಸ್ತಾಪಿಸಿದ್ದಾರೆ. ಮುಂದೆ ಯಾವ ರೀತಿ ಆಡಳಿತ ನಡೆಸುತ್ತಾರೋ ಕಾದು ನೋಡೋಣ ಎಂದು ಹೇಳಿದರು.