ಲಾಕಪ್‍ಡೆತ್ ಪ್ರಕರಣ-ಮಾಜಿ ಐಪಿಎಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

ಗಾಂಧಿನಗರ, ಜೂ.20- ಎರಡು ದಶಕಗಳ ಹಿಂದಿನ ಲಾಕಪ್‍ಡೆತ್ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್‍ಭಟ್‍ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಗುಜರಾತ್‍ನ ಜಾಮ್‍ನಗರ್ ಸೆಷನ್ ನ್ಯಾಯಾಲಯ ಲಾಕಪ್‍ಡೆತ್ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 302ರಡಿ ಸಂಜೀವ್‍ಭಟ್‍ಗೆ ಜೀವಾವಧಿ ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿತು.

1990ರಲ್ಲಿ ಈ ಘಟನೆ ನಡೆದಿತ್ತು. 2002ರಲ್ಲಿ ಗುಜರಾತ್‍ನ ಗೋದ್ರಾದಲ್ಲಿ ನಡೆದ ಹತ್ಯಾಕಾಂಡ ಸಂಬಂಧ ಅಂದಿನ ಮುಖ್ಯಮಂತ್ರಿ ಹಾಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದೇ ಸಂಜೀವ್‍ಭಟ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಆದರೆ, ಎಸ್‍ಐಟಿ ನರೇಂದ್ರ ಮೋದಿಗೆ ಗೋದ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಕ್ಲೀನ್‍ಚಿಟ್ ಕೊಟ್ಟಿದ್ದರಿಂದ ಯಾವುದೇ ರೀತಿಯ ಮಧ್ಯಂತರ ತೀರ್ಪು ನೀಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತ್ತು.

ಲಾಕಪ್‍ಡೆತ್ ಪ್ರಕರಣ ಸಂಬಂಧ ಕಳೆದ ವಾರವಷ್ಟೆ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದ ಸಂಜೀವ್‍ಭಟ್ ತಮ್ಮ ಪರ ಹೆಚ್ಚುವರಿಯಾಗಿ 11 ಮಂದಿ ಸಾಕ್ಷಿ ಹೇಳಲಿದ್ದಾರೆ. ಅದನ್ನು ಪರಿಗಣಿಸಬೇಕೆಂದು ಕೋರಿದ್ದರು.

ಆದರೆ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಅಜಯ್ ರಸ್ತೋಗಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈಗಾಗಲೇ ನ್ಯಾಯಾಲಯ ಇದೇ ಪ್ರಕರಣದಲ್ಲಿ ತೀರ್ಪು ನೀಡಿರುವುದರಿಂದ ಪುನಃ ಮಧ್ಯಂತರ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತ್ತು.

ಇದೀಗ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿರುವುದರಿಂದ ಸಂಜೀವ್‍ಭಟ್ ಜೈಲಿನಲ್ಲೇ ಕಾಲ ಕಳೆಯಬೇಕಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ