ಭಾರತ ಮತ್ತು ಶ್ರೀಲಂಕಾದ ಮೇಲೆ ಐಎಸ್‍ಐಎಸ್ ವಕ್ರದೃಷ್ಟಿ

ತಿರುವನಂತಪುರಂ, ಜೂ.20- ಸಿರಿಯಾ ಮತ್ತು ಇರಾಕ್‍ನಲ್ಲಿ ತನ್ನ ಪ್ರಾಬಲ್ಯಕಳೆದುಕೊಂಡಿರುವ ಐಎಸ್‍ಐಎಸ್ ಭಯೋತ್ಪಾದಕರ ವಕ್ರದೃಷ್ಟಿ ಈಗ ಭಾರತ ಮತ್ತು ಶ್ರೀಲಂಕಾದ ಮೇಲೆ ನೆಟ್ಟಿದ್ದು , ಕರಾವಳಿ ಪ್ರದೇಶಗಳ ಮೇಲೆ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗುತ್ತಿದ್ದಾರೆ ಎಂಬ ಆತಂಕಕಾರಿ ವರದಿಗಳು ಲಭಿಸಿವೆ.

ಈ ಸಂಬಂಧ ಕೇರಳದ ಗುಪ್ತಚರ ಇಲಾಖೆಗಳು ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಬರೆದಿರುವ ಮೂರು ಪತ್ರಗಳಲ್ಲಿ ಈ ಆಘಾತಕಾರಿ ಸಂಗತಿ ಬಹಿರಂಗಗೊಂಡಿದೆ.

ಐಸಿಸ್ ಉಗ್ರರು ಸಿರಿಯಾ ಮತ್ತು ಇರಾಕ್‍ನಲ್ಲಿ ತಮ್ಮ ಪ್ರಾಬಲ್ಯ ಕಳೆದುಕೊಂಡಿದ್ದು, ಅವರ ಷಡ್ಯಂತ್ರದಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿದ್ದು , ಭಾರತ ಮತ್ತು ಶ್ರೀಲಂಕಾ ಅವರ ಮುಖ್ಯ ಟಾರ್ಗೆಟ್ ಆಗಿದೆ ಎಂದು ಗುಪ್ತಚರ ಮಾಹಿತಿ ಎಚ್ಚರಿಕೆ ನೀಡಿದೆ.

ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ದಿನದಂದು ಭಾರತೀಯರು ಸೇರಿದಂತೆ 250ಕ್ಕೂ ಹೆಚ್ಚು ಜನರನ್ನು ಉಗ್ರರು ಬಲಿ ಪಡೆದ ನಂತರ ಭಾರತ ಇಲ್ಲವೆ ದ್ವೀಪ ರಾಷ್ಟ್ರದಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ನಡೆಸಲು ಐಸಿಸ್ ಉಗ್ರರು ಕಾರ್ಯತಂತ್ರ ರೂಪಿಸಿದ್ದಾರೆ.

ಭೂ ಅಥವಾ ವಾಯು ಮಾರ್ಗಕ್ಕಿಂತ ಸಾಗರ ಮಾರ್ಗದಲ್ಲಿ ಕರಾವಳಿ ಪ್ರದೇಶಗಳನ್ನು ಸುಲಭವಾಗಿ ತಲುಪಿ ಬುಡ ಮೇಲು ಕೃತ್ಯಗಳನ್ನು ನಡೆಸುವುದು ಸುಲಭ ಎಂಬುದು ಭಯೋತ್ಪಾದಕರ ಷಡ್ಯಂತ್ರವಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ವಿಶೇಷವಾಗಿ ಕೊಚ್ಚಿ ಉಗ್ರರ ಮುಖ್ಯ ಟಾರ್ಗೆಟ್ ಎನ್ನಲಾಗಿದೆ. ಶಾಪಿಂಗ್ ಮಾಲ್‍ಗಳು, ಬಂದರುಗಳು ಮತ್ತು ಜನ ನಿಬಿಡ ಸ್ಥಳಗಳ ಮೇಲೆ ದಾಳಿ ನಡೆಸುವುದು ಭಯೋತ್ಪಾದಕರ ಹುನ್ನಾರವಾಗಿದೆ.

ಸಿರಿಯಾ ಮತ್ತು ಇರಾಕ್‍ನಲ್ಲಿ ಸೇನಾ ಪಡೆಗಳ ದಾಳಿಯಿಂದ ಹೊಡೆತಕ್ಕೆ ಸಿಲುಕಿ ತಮ್ಮ ಪ್ರಾಬಲ್ಯ ಕಳೆದುಕೊಂಡ ಇಸ್ಲಾಮಿಕ್ ಸ್ಟೇಟ್ ಉಗ್ರರು ಈಗ ತಮ್ಮ ತಮ್ಮ ದೇಶಗಳಿಗೆ ಹಿಂದಿರುಗಿದ್ದು , ರಹಸ್ಯ ಸಂಕೇತಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದಾರೆ.

ಈ ಹಿಂದೆ ಟೆಲಿಗ್ರಾಂ ಮೂಲಕ ದಾಳಿ ಕಾರ್ಯಾಚರಣೆ ಮತ್ತು ಇತರ ಗೌಪ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಉಗ್ರರ ಷಡ್ಯಂತ್ರ ಈಗ ಬದಲಾಗಿದೆ. ಚಾಟ್ ಸೆಕ್ಯೂರ್, ಸೈನ್ ಮತ್ತು ಸೈಲೆಂಟ್ ಟೆಕ್ಸ್ ಆ್ಯಪ್ ಮೂಲಕ ಉಗ್ರರು ಈಗಾಗಲೇ ಸಂವಹನ ನಡೆಸುತ್ತಿದ್ದಾರೆ.

ಕೇರಳ , ತಮಿಳುನಾಡು, ಆಂಧ್ರಪ್ರದೇಶ ಮತ್ತು ಕಾಶ್ಮೀರ ಐಎಸ್ ಉಗ್ರರ ಮುಖ್ಯ ಕಾರ್ಯಾಚರಣೆಯ ಕೇಂದ್ರ ಬಿಂದುವಾಗಲಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೇರಳದಿಂದ ಸುಮಾರು 100ಕ್ಕೂ ಹೆಚ್ಚು ಯುವಕರು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಸೇರಿದ್ದಾರೆ.

ಐಎಸ್‍ಗೆ ಸೇರಲು ಹವಣಿಸುತ್ತಿದ್ದ 3000ಕ್ಕೂ ಹೆಚ್ಚು ಉಗ್ರರ ಬೆಂಬಲಿಗರನ್ನು ದೇಶಾದ್ಯಂತ 21 ಸಮಾಲೋಚನಾ ಕೇಂದ್ರಗಳ ಮೂಲಕ ನಿಯಂತ್ರಿಸಲಾಗಿದೆ.

ಐಎಸ್ ಉಗ್ರರು ಭದ್ರತೆ ಮತ್ತು ಇತರ ಮಹತ್ವದ ಸಂಗತಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ಆನ್‍ಲೈನ್ ಹನಿ ಟ್ರ್ಯಾಪ್ ವಿಧಾನ ಬಳಸುತ್ತಿರುವ ಮತ್ತೊಂದು ಆಘಾತಕಾರಿ ಸಂಗತಿಯು ಬದಲಾಗಿದೆ.

ಕರಾವಳಿ ಪ್ರದೇಶಗಳ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ಕಳೆದ ತಿಂಗಳೇ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕೇರಳಾದ್ಯಂತ ಕೋಸ್ಟಲ್ ಏರಿಯಾಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ