ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಗ್ಗುತ್ತಿರುವ ನ್ಯೂಜಿಲೆಂಡ್ 4ನೇ ಗೆಲುವು ಸಾಧಿಸಿದೆ. ಸೌತ್ ಆಫ್ರಿಕಾ ವಿರುದ್ಧದ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 9 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಹೋರಾಟ ಬಹುತೇಕ ಅಂತ್ಯಗೊಂಡಿದೆ.
ಗೆಲುವಿಗೆ 242 ರನ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ಆರಂಭದಲ್ಲೇ ಕೊಲಿನ್ ಮುನ್ರೋ ವಿಕೆಟ್ ಕಳೆದುಕೊಂಡಿತು. ಮುನ್ರೋ 9 ರನ್ ಸಿಡಿಸಿ ಔಟಾದರು.
ಮಾರ್ಟಿನ್ ಗಪ್ಟಿಲ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಜೊತೆಯಾಟದಿಂದ ನ್ಯೂಜಿಲೆಂಡ್ ಚೇತರಿಸಿಕೊಂಡಿತು. 2ನೇ ವಿಕೆಟ್‌ಗೆ ಈ ಜೋಡಿ 60 ರನ್ ಜೊತೆಯಾಟ ನೀಡಿತು. ಗಪ್ಟಿಲ್ 35 ರನ್ ಸಿಡಿಸಿ ನಿರ್ಗಮಿಸಿದರು.
ಗಪ್ಟಿಲ್ ವಿಕೆಟ್ ಪತನದ ಬೆನ್ನಲ್ಲೇ ನ್ಯೂಜಿಲೆಂಡ್ ದಿಢೀರ್ ಕುಸಿತ ಕಂಡಿತು. ರಾಸ್ ಟೇಲರ್ ಹಾಗೂ ಟಾಮ್ ಲಾಥಮ್ ಅಬ್ಬರಿಸಲಿಲ್ಲ. ಏಕಾಂಗಿ ಹೋರಾಟ ನೀಡುತ್ತಿದ್ದ ವಿಲಿಯಮ್ಸನ್‌ಗೆ ಜೇಮ್ಸ್ ನೀಶಮ್ ಜೊತೆಯಾದರು. ಆದರೆ ನೀಶಮ್ 23 ರನ್ ಸಿಡಿಸಿ ಔಟಾದರು. ವಿಲಿಯಮ್ಸನ್ ಹಾಗೂ ಕೊಲಿನ್ ಡೆ ಗ್ರ್ಯಾಂಡ್‌ಹೊಮ್ಮೆ ಜೊತೆಯಾಟದಿಂದ ನ್ಯೂಜಿಲೆಂಡ್ ತಂಡದಲ್ಲಿ ಗೆಲುವಿನ ಆಸೆ ಚಿಗುರಿತು.
ಹೋರಾಟ ರೋಚಕ ಘಟ್ಟ ಸಾಗುತ್ತಿದ್ದಂತೆ ಸೌತ್ ಆಫ್ರಿಕಾ ಪಂದ್ಯದ ಮೇಲಿನ ಹಿಡಿತ ಸಡಿಲಗೊಂಡಿತು. ಅದ್ಬುತ ಪ್ರದರ್ಶನ ನೀಡಿದ ಗ್ರ್ಯಾಂಡ್‌ಹೊಮ್ಮೆ 60 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ನ್ಯೂಜಿಲೆಂಡ್ ತಂಡದಲ್ಲಿ ಆತಂಕ ಮನೆ ಮಾಡಿತು. ವಿಲಿಯಮ್ಸನ್ ಬೌಂಡರಿಯಿಂದ ಅಂತಿಮ 6 ಎಸೆತದಲ್ಲಿ ನ್ಯೂಜಿಲೆಂಡ್ ಗೆಲುವಿಗೆ 8 ರನ್ ಅವಶ್ಯಕತೆ ಇತ್ತು. ಭರ್ಜರಿ ಸಿಕ್ಸರ್ ಸಿಡಿಸೋ ಮೂಲಕ ವಿಲಿಯಮ್ಸನ್ ಸೆಂಚುರಿ ಸಿಡಿಸಿದರು. ವಿಲಿಯಮ್ಸನ್ ಅಜೇಯ 103 ರನ್ ಸಿಡಿಸೋ ಮೂಲಕ ನ್ಯೂಜಿಲೆಂಡ್ 48.3 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದರೆ, ಇತ್ತ ಸೌತ್ ಆಫ್ರಿಕಾ ತಂಡ ವಿಶ್ವಕಪ್ ಹೋರಾಟ ಬಹುತೇಕ ಅಂತ್ಯಗೊಂಡಿದೆ.