ಎಚ್.ವಿಶ್ವನಾಥ್ ಮತ್ತು ನನ್ನ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ-ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಜೂ.19-ಮಾಜಿ ಸಚಿವ ಎಚ್.ವಿಶ್ವನಾಥ್ ಹಾಗೂ ನಾವು 40 ವರ್ಷಗಳಿಂದಲೂ ಸ್ನೇಹಿತರಾಗಿದ್ದು, ಅವರು ತಮ್ಮನ್ನು ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಇಂದು ಬೆಳಗ್ಗೆ ವಿಶ್ವನಾಥ್ ಅವರು ನಮ್ಮನ್ನು ಭೇಟಿಯಾಗಿದ್ದಾರೆ. ಅದರಲ್ಲಿ ವಿಶೇಷವೇನಿಲ್ಲ. ನಮ್ಮ ಮನೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದವರೂ ಬರುತ್ತಾರೆ. ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಅದು ಅವರ ಪಕ್ಷದ ಆಂತರಿಕ ವಿಚಾರವಾಗಿದ್ದು, ನಮಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ ಅವರು, ಅದನ್ನು ಪಕ್ಷದ ರಾಜ್ಯಾಧ್ಯಕ್ಷರಿದ್ದಾರೆ ನೋಡಿಕೊಳ್ಳಲಿ ಎಂದಷ್ಟೇ ಹೇಳಿದರು.

ತಾವು ಸಚಿವ ಸ್ಥಾನ ಕೊಡುವಂತೆ ಯಾರ ಮನೆ ಬಾಗಿಲಿಗೆ ಹೋಗಿ ಕೇಳುವುದಿಲ್ಲ. ಸಚಿವ ಸ್ಥಾನದ ಆಸೆಯೂ ತಮಗಿಲ್ಲ ಎಂದು ಹೇಳಿದರು.

ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಅವರು ಯಾವ ಕಾರಣಕ್ಕೆ ದೆಹಲಿಗೆ ಹೋಗಿದ್ದಾರೆ ಎಂಬುದು ತಮಗೆ ಗೊತ್ತಿಲ್ಲ ಎಂದರು.

ಸಚಿವ ಸ್ಥಾನ ನೀಡುವಲ್ಲಿ ತಾರತಮ್ಯ ವಾಗಿದೆ ಎಂಬುದನ್ನು ಪ್ರಸ್ತಾಪ ಮಾಡಿದ್ದೇನೆಯೇ ಹೊರತು ತಾವು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ತಿಳಿಸಿದರು.

ಬಳ್ಳಾರಿಯ ಗಣಿಗಾರಿಕೆ ವಿಚಾರಕ್ಕೂ, ಜಿಂದಾಲ್ ಕಂಪನಿ ವಿಚಾರಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ. ಈ ವಿಚಾರ ನನಗಿಂತ ಎಚ್.ಕೆ.ಪಾಟೀಲ್ ಅವರಿಗೇ ಚೆನ್ನಾಗಿ ತಿಳಿದಿದೆ. ಅವರನ್ನೇ ಕೇಳುವುದು ಉತ್ತಮ ಎಂದರು.

ಬೋವಿಪಾಳ್ಯದಲ್ಲಿ ಹೈಟೆನ್ಷನ್ ತಂತಿ ಹಾದುಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಹೈಟೆನ್ಷನ್ ತಂತಿ ಹಾದುಹೋಗಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳುವಂತಿಲ್ಲ. ಆದರೂ ಅಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅವರು ಸ್ಥಳಾಂತರ ಮಾಡಿದರೆ ಮನೆ ಕಟ್ಟಿಸಿಕೊಡಬಹುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ