ಬೆಂಗಳೂರು, ಜೂ.17-ಐಎಂಎ ವಂಚನೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ಷಮಿಸುವ ಪ್ರಶ್ನೆ ಇಲ್ಲ, ಅವರು ಸಚಿವರಾಗಿರಲಿ ಅಥವಾ ಶಾಸಕರಾಗಿರಲಿ ಕಾನೂನು ರೀತಿ ಶಿಕ್ಷೆಯಾಗಲೇಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆ ಮೇಲೆ ನಮಗೆ ನಂಬಿಕೆ ಇದೆ. ಎಸ್ಐಟಿ ಇದನ್ನು ಸಮರ್ಥವಾಗಿ ನಿಭಾಯಿಸಲಿದೆ. ಅದರಲ್ಲಿ ಯಾವುದೇ ಲೋಪ ಆಗದು ಎಂದರು.
ಸಿಬಿಐಗೆ ಕೊಟ್ಟ ಕೇಸ್ಗಳು ಏನಾಗಿವೆ ಎಂದು ನಮಗೆ ಗೊತ್ತಿದೆ. ದಿಢೀರನೆ ಬಿಜೆಪಿಯವರಿಗೆ ಸಿಬಿಐ ಮೇಲೆ ನಂಬಿಕೆ ಬಂದಂತಿದೆ ಎಂದು ಲೇವಡಿ ಮಾಡಿದರು.
ಚಾರ್ಜ್ಶೀಟ್ ಆಗದೆ ಯಾರ ಹೆಸರನ್ನು ಬಹಿರಂಗಪಡಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹಣ ಕಳೆದುಕೊಂಡವರಿಗೆ ಹಣ ಕೊಡಿಸುವುದು ನಮ್ಮ ಮುಂದಿರುವ ಪ್ರಶ್ನೆ. ವಂಚಕರ ಆಸ್ತಿ-ಪಾಸ್ತಿ ಮಾರೋದು, ಇಂತಹ ಕಂಪನಿಗಳು ತಲೆ ಎತ್ತದಂತೆ ನೋಡಿಕೊಳ್ಳುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.
ಶೋಭಕ್ಕಾ… ಸ್ವಲ್ಪ ತಾಳ್ಮೆಯಿಂದ ಇರಕ್ಕಾ… ಎನ್ನುವ ಮೂಲಕ ತಿರುಗೇಟು ನೀಡಿದ ಅವರು, ಜಿಂದಾಲ್ ವಿಚಾರದಲ್ಲಿ ತಕರಾರಿದ್ದರೆ ಕಮಿಟಿ ಮುಂದೆ ಹೋಗಲಿ ಅದಕ್ಕಾಗಿಯೇ ಕಮಿಟಿ ರಚನೆಯಾಗಿದೆ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.
ಅವರು ಹೆಣ್ಣು ಮಗಳು ಎಂದು ನಾವು ಮಾತನಾಡುತ್ತಿಲ್ಲ. ನಾವು ಬಿಜಾಪುರದವರು ನಮಗೆ ಬೇರೆ ಪದಗಳೇ ಗೊತ್ತು. ಶೋಭಾಕರಂದ್ಲಾಜೆಯಂತಹ ಹೆಣ್ಣು ಮಕ್ಕಳ ಬಾಯಲ್ಲಿ ಅಂತಹ ಪದ ಬರಬಾರದು. ಅವರ ಹಿನ್ನೆಲೆ, ಸಂಸ್ಕøತಿ, ಸಂಸ್ಕಾರ ಜನರಿಗೆ ಗೊತ್ತಿದೆ.ಅದೇ ರೀತಿ ನಮ್ಮ ಸಂಸ್ಕøತಿ, ಸಂಸ್ಕಾರ ಜನತೆಗೆ ಗೊತ್ತಿದೆ ಎಂದು ನುಡಿದರು.
ಗುಂಡ್ಲುಪೇಟೆ ಪ್ರಕರಣ: ಗುಂಡ್ಲುಪೇಟೆ ಯುವಕನ ಬೆತ್ತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಜಿಪಿ ಅವರೊಂದಿಗೆ ಮಾತನಾಡಿದ್ದೇನೆ. ಯಾರೇ ತಪ್ಪಿತಸ್ಥರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.