ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಮ್ಯಾಂಚೆಸ್ಟರ್’ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗೆ ಸೋಲಿನ ರುಚಿ ತೋರಿಸಿದೆ. ಇದರೊಂದಿಗೆ ವಿಶ್ವಕಪ್’ನಲ್ಲಿ 7ನೇ ಬಾರಿಗೆ ಪಾಕ್ ವಿರುದ್ಧ ಭಾರತ ಗೆಲುವಿನ ನಗೆ ಬೀರಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಭಾರತ, ಉಪನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಕೆ.ಎಲ್ ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಸಮಯೋಚಿತ ಅರ್ಧಶತಕಗಳ ನೆರವಿನಿಂದ 336 ರನ್ ಬಾರಿಸಿತ್ತು.
ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪಾಕ್ ತಂಡಕ್ಕೆ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 40 ಓವರ್’ಗಳಲ್ಲಿ 302 ರನ್’ಗಳ ಗುರಿ ನೀಡಲಾಗಿತ್ತು. ಆದರೆ ಪಾಕಿಸ್ತಾನ 40 ಓವರ್ ಅಂತ್ಯದ ವೇಳೆಗೆ 212 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ವಿರುದ್ಧ ಪಾಕಿಸ್ತಾನ 89 ರನ್ ಗಳ ಅಂತರದ ಸೋಲೊಪ್ಪಿಕೊಂಡಿತು.
ಭಾರತ ಪರ ವಿಜಯ್ ಶಂಕರ್, ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದು ಭಾರತದ ಗೆಲುವನ್ನು ಸುಲಭಗೊಳಿಸಿದರು. ಟೀಂ ಇಂಡಿಯಾದ ಈ ಪ್ರದರ್ಶನಕ್ಕೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತದ ಕ್ರಿಕೆಟಿಗರು ಮಾತ್ರವಲ್ಲದೆ, ಪಾಕಿಸ್ತಾನ, ಇಂಗ್ಲೆಂಡ್ ಸೇರಿದಂತೆ ಹಲವು ದೇಶದ ಕ್ರಿಕೆಟಿಗರು ಟ್ವಿಟರ್’ನಲ್ಲಿ ಟೀಂ ಇಂಡಿಯಾಗೆ ಜೈ ಹೋ ಎಂದಿದ್ದಾರೆ.