ನವದೆಹಲಿ: ಮ್ಯಾನ್ಮಾರ್ ಗಡಿಯೊಳಗೆ ಅಡಗಿಕೊಂಡಿರುವ ಭಯೋತ್ಪಾದನಾ ಸಂಘಟನೆಗಳ ಶಿಬಿರಗಳ ಮೇಲೆ ಭಾರತ ಮತ್ತು ಮ್ಯಾನ್ಮಾರ್ ಜಂಟಿಯಾಗಿ ದಾಳಿ ನಡೆಸಿವೆ. ಸನ್ಶೈನ್-2 ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರರನ್ನು ಭಾರತೀಯ ಸೇನಾಪಡೆಯ ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೇ 16ರಿಂದ ಜೂನ್ 8ರ ನಡುವೆ ಭಾರತ ಮತ್ತು ಮ್ಯಾನ್ಮಾರ್ ಸೇನಾಪಡೆ ಯೋಧರು ಸಂಯೋಜಿತವಾಗಿ ಈ ದಾಳಿಗಳನ್ನು ಸಂಘಟಿಸಿದ್ದರು ಎನ್ನಲಾಗಿದೆ. ವಿಶೇಷ ಪಡೆಗಳು, ಅಸ್ಸಾಂ ರೈಫಲ್ಸ್ ಮತ್ತು ಇನ್ಫೆಂಟ್ರ ಘಾತಕ್ಸ್ ಸೇರಿ ಭಾರತೀಯ ಸೇನಾಪಡೆಯ ಎರಡು ಬೆಟಾಲಿಯನ್ ಯೋಧರು ಮತ್ತು ಮ್ಯಾನ್ಮಾರ್ ಸೇನಾಪಡೆಯ ನಾಲ್ಕು ಬ್ರಿಗೇಡ್ಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದವು.
ಇದಕ್ಕೂ ಮುನ್ನ ಫೆಬ್ರವರಿ 22ರಿಂದ 26ರವರೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದ ಭಾರತ ಮತ್ತು ಮ್ಯಾನ್ಮಾರ್ ಸೇನಾಪಡೆಗಳು ಸನ್ಶೈನ್ 1 ಕಾರ್ಯಾಚರಣೆ ಹೆಸರಿನಲ್ಲಿ ಅರ್ಕನೀಸ್ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ್ದವು.
ಮ್ಯಾನ್ಮಾರ್ನ ಗಡಿಯೊಳಗೆ ಇದ್ದ ಎನ್ಎಸ್ಸಿಎನ್-ಕೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನಾಪಡೆ ಯೋಧರು 2015ರಲ್ಲಿ ದಾಳಿ ನಡೆಸಿದ್ದರು. ತನಗೆ ಪೂರ್ವ ಮಾಹಿತಿ ನೀಡದೆ ಏಕಪಕ್ಷೀಯವಾಗಿ ದಾಳಿ ನಡೆಸಿದ್ದರ ಬಗ್ಗೆ ಮ್ಯಾನ್ಮಾರ್ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ಸೇನಾಪಡೆ ಜತೆ ಉಗ್ರರ ನೆಲೆಗಳ ಮೇಲೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಭಾರತ ನಿರ್ಧರಿಸಿತ್ತು. ತನ್ನ ಈ ಪ್ರಯತ್ನ ಸಫಲವಾಗಿರುವುದಾಗಿ ಭಾರತ ಹೇಳಿಕೊಂಡಿದೆ.
India and Myanmar forces coordinate to destroy NE insurgent camps across border