ಬೆಂಗಳೂರು, ಜೂ.15-ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಅತೃಪ್ತರಾಗಿರುವ ಎಲ್ಲರನ್ನು ಒಟ್ಟುಗೂಡಿಸುವ ಪ್ರಯತ್ನವನ್ನು ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ನಡೆಸಿದ್ದಾರೆ.
ಕಾಂಗ್ರೆಸ್‍ನಲ್ಲಿ ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಸುಮಾರು 20ಕ್ಕೂ ಹೆಚ್ಚು ಶಾಸಕರು ಒಳಗೊಳಗೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಬಿಜೆಪಿ ಆಹ್ವಾನ ನೀಡಿದರೆ ಕಾಂಗ್ರೆಸ್ ತೊರೆದು ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ.
ಆದರೆ ಪ್ರಸ್ತುತ ರಾಜಕೀಯದಲ್ಲಿ ಬಹಿರಂಗ ಹೇಳಿಕೆ ನೀಡಿ, ಟೀಕೆ ಮಾಡಿ ಜೀರ್ಣಿಸಿಕೊಳ್ಳುವುದು ಕಷ್ಟವಾಗಿರುವುದರಿಂದ ಅತೃಪ್ತರು ಮೌನಕ್ಕೆ ಶರಣಾಗಿದ್ದಾರೆ. ಒಳಗೊಳಗೇ ವ್ಯಾಪಕವಾಗಿರುವ ಅಸಮಾಧಾನದ ಲಾಭ ಪಡೆಯಲು ಬಿಜೆಪಿ ಕೂಡ ತನ್ನದೇ ಆದ ತಂತ್ರಗಾರಿಕೆ ನಡೆಸಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಅಖಾಡಕ್ಕಿಳಿದಿದ್ದು, ಈ ಬಾರಿ ಅತೃಪ್ತರನ್ನು ಒಂದೆಡೆ ಸೇರಿಸಿ ಸಭೆ ನಡೆಸುವ ತಯಾರಿ ಮಾಡಿದ್ದಾರೆ.
ಈವರೆಗೂ ವಿಸ್ತರಣೆ ಅಥವಾ ಪುನಾರಚನೆಯಾಗಲಿದೆ ತಮಗೂ ಅವಕಾಶ ಸಿಗಲಿದೆ ಎಂಬ ಆಶಾವಾದದಲ್ಲಿ ಬಹಳಷ್ಟು ಶಾಸಕರಿದ್ದರು. ಸಂಪುಟ ಪುನಾರಚನೆ ಕೈಬಿಟ್ಟು ಕೇವಲ ವಿಸ್ತರಣೆಯಷ್ಟೇ ಮಾಡಲಾಗಿದ್ದು, ಇದು ಕಾಂಗ್ರೆಸ್‍ನ ಅತೃಪ್ತರನ್ನು ಕೆರಳಿಸಿದೆ.
ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಇದ್ದು ಎರಡು ಸ್ಥಾನಕ್ಕೆ ಮಾತ್ರ ನೇಮಕ ಮಾಡಿ ಒಂದನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಕಾಂಗ್ರೆಸ್ ತನ್ನ ಪಾಲಿನ ಸ್ಥಾನಕ್ಕೆ ಪಕ್ಷದ ನಿಷ್ಠಾವಂತರನ್ನು ನೇಮಿಸುವ ಬದಲು ಪಕ್ಷೇತರರಿಗೆ ಅವಕಾಶ ನೀಡಿದೆ. ಇದು ಬ್ಲ್ಯಾಕ್‍ಮೇಲ್ ರಾಜಕಾರಣಕ್ಕೆ ಮಣೆ ಹಾಕಿದಂತಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ರಮೇಶ್ ಜಾರಕಿ ಹೊಳಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರಿಗೆ ಅವಕಾಶ ಕೊಡಲು ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಆಸಕ್ತಿ ತೋರಿದರು.
ಆದರೆ ಕಾಂಗ್ರೆಸ್ ನಾಯಕತ್ವ ರಮೇಶ್ ಜಾರಕಿ ಹೊಳಿ ಅವರನ್ನು ದೂರ ಇಟ್ಟಿದೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಬ್ಲ್ಯಾಕ್‍ಮೇಲ್ ರಾಜಕಾರಣಕ್ಕೆ ಕಾಂಗ್ರೆಸ್ ಜಗ್ಗುವುದಿಲ್ಲ ಎಂದು ಸಂದೇಶ ರವಾನಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ರಮೇಶ್ ಜಾರಕಿ ಹೊಳಿ ಅವರು ಬಿಜೆಪಿಗೂ ಹೋಗುವಂತಿಲ್ಲ. ಇತ್ತ ಕಾಂಗ್ರೆಸ್‍ನಲ್ಲೂ ಉಳಿಯಲಾಗದ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
ಹೀಗಾಗಿ ಮತ್ತೊಮ್ಮೆ ತಮ್ಮ ಶಕ್ತಿ ಪ್ರದರ್ಶನ ಮಾಡಲು ರಮೇಶ್ ಜಾರಕಿ ಹೊಳಿ ಮುಂದಾಗಿದ್ದು, ಕಾಂಗ್ರೆಸ್‍ನ ಅತೃಪ್ತರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಮಹೇಶ್‍ಕುಮಟಳ್ಳಿ, ಪ್ರತಾಪ್‍ಗೌಡ ಪಾಟೀಲ್,ನಾಗೇಂದ್ರ, ಗಣೇಶ್, ಬಿ.ಸಿ.ಪಾಟೀಲ್, ಸುಧಾಕರ್, ಆನಂದ್‍ಸಿಂಗ್, ಬಿ.ಕೆ.ಸಂಗಮೇಶ್ ಮತ್ತಿತರ ಶಾಸಕರುಗಳನ್ನು ರಮೇಶ್ ಜಾರಕಿ ಹೊಳಿ ಸಂಪರ್ಕಿಸಲು ಯತ್ನಿಸಿದ್ದಾರೆ.
ಆದರೆ ಈ ಬಾರಿಯ ಆಪರೇಷನ್ ಕಮಲ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ, ರಮೇಶ್ ಜಾರಕಿ ಹೊಳಿ ಪ್ರಯತ್ನ ಕೈಗೂಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.