ಪೊಲೀಸರು ಹಿರಿಯರ ಜತೆ ಸ್ನೇಹಪರವಾಗಿರಬೇಕು-ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್

ಬೆಂಗಳೂರು, ಜೂ.14- ವಿಶ್ವ ಹಿರಿಯರ ಶೋಷಣೆ, ಜಾಗೃತೀಕರಣ ದಿನಾಚರಣೆ ಅಂಗವಾಗಿ ಪೊಲೀಸ್ ಸಿಬ್ಬಂದಿಗಳಿಗೆ ಇಂದು ಒಂದು ದಿನದ ಕಾರ್ಯಾಗಾರವನ್ನು ಆಯುಕ್ತರ ಕಚೇರಿಯಲ್ಲಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪೊಲೀಸರು ಹಿರಿಯರ ಜತೆ ಹೇಗೆ ಸ್ನೇಹಪರವಾಗಿರಬೇಕು ಹಾಗೂ ಅವರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಯಿತು.

ಹಿರಿಯ ನಾಗರಿಕರ ಕಲ್ಯಾಣ, ಜೀವನಾಂಶ ಕಾಯ್ದೆ ಬಗ್ಗೆ ಠಾಣೆಗೆ ಬರುವ ಹಿರಿಯ ನಾಗರಿಕರಿಗೆ ಹೇಗೆ ಅರಿವು ಮೂಡಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳಿಗೆ ಮಾಹಿತಿ ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಹಿರಿಯರು ತಮಗೇನಾದರೂ ತೀವ್ರವಾದ ಸಮಸ್ಯೆಯಾದಲ್ಲಿ ಪೊಲೀಸರೇ ತಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವರು ಎಂಬ ಉದ್ದೇಶದಿಂದ ಠಾಣೆಗೆ ಬರುವುದರಿಂದ ಪೊಲೀಸರು ಹಿರಿಯರ ಜತೆ ಸ್ನೇಹಪರವಾಗಿ ಅವರ ದೂರನ್ನು ಆಲಿಸಬೇಕೆಂದು ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್‍ಕಾರ್ಯಾಗಾರದಲ್ಲಿ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಅವರು ಹಿರಿಯ ನಾಗರಿಕರ ಮೇಲಾಗುತ್ತಿರುವ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರ ಪಾತ್ರ ಏನೆಂಬುದನ್ನು ಉದ್ದೇಶಿಸಿ ಮಾತನಾಡಿದರು.

ಹಿರಿಯರ ಸಹಾಯವಾಣಿಯು ಬೆಂಗಳೂರು ನಗರ ಪೊಲೀಸ್ ಹಾಗೂ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ನಡುವಣ ಒಂದು ಜಂಟಿ ಯೋಜನೆಯಾಗಿದ್ದು, 2002ರಿಂದ ಹಿರಿಯರ ಮೇಲಾಗುತ್ತಿರುವ ದೌರ್ಜನ್ಯ, ನಿಂದನೆ ಹಾಗೂ ಅವರ ಹಕ್ಕುಗಳನ್ನು ರಕ್ಷಿಸಲು ಸತತವಾಗಿ ಪ್ರಯತ್ನಿಸುತ್ತಿದೆ.

ಹಿರಿಯರ ಸಹಾಯವಾಣಿಯು ಇದುವರೆಗೂ ಸುಮಾರು 2.2 ಲಕ್ಷ ಕರೆಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 9692ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಿಕೊಂಡು 5176 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸಿ 32,374 ಹಿರಿಯರಿಗೆ ಸಮಾಲೋಚನೆ ಮಾಡಲಾಗಿದೆ.

ವರದಿ ಪ್ರಕಾರ, ಸಮಾಜದಲ್ಲಿ ಶೇ.60ರಷ್ಟು ಹಿರಿಯರು ದೌರ್ಜನ್ಯಕ್ಕೊಳಗಾಗಿದ್ದು, ಅವರಲ್ಲಿ ಶೇ.18ರಷ್ಟು ಹಿರಿಯರು ಮಾತ್ರ ಮಕ್ಕಳ ವಿರುದ್ಧ ದೂರು ಕೊಡಲು ಮುಂದೆ ಬರುತ್ತಿದ್ದಾರೆ.

2016-17ನೆ ಸಾಲಿನಲ್ಲಿ ಹಿರಿಯರ ದೌರ್ಜನ್ಯ ಮತ್ತು ನಿಂದನೆಗೆ ಸಂಬಂಧಿಸಿದಂತೆ ಹಿರಿಯರ ಸಹಾಯವಾಣಿಯಲ್ಲಿ 171 ದೂರುಗಳು ದಾಖಲಾಗಿದ್ದು, 2018-19ರಲ್ಲಿ ಸುಮಾರು 264 ದೂರುಗಳು ದಾಖಲಾಗಿವೆ.

ಪಾಲಕರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ 2007ರ ಕಾಯ್ದೆಗೆ ಸಂಬಂಧಿಸಿದಂತೆ ಶೇ.11ರಷ್ಟು ಹಿರಿಯ ನಾಗರಿಕರಿಗೆ ಮಾತ್ರ ಇದರ ಬಗ್ಗೆ ಮಾಹಿತಿಯಿದ್ದು, ಇದಕ್ಕೆ ಸಂಬಂಧಿಸಿದಂತೆ ಹಿರಿಯರು ಒಂದು ವೇಳೆ ತಮ್ಮ ಆದಾಯದಿಂದ ತಮ್ಮನ್ನು ತಾವು ನೋಡಿಕೊಳ್ಳಲು ಸಾಧ್ಯವಾಗದ ಪಕ್ಷದಲ್ಲಿ ಹಾಗೂ ದಾನ ಪತ್ರವನ್ನು ರದ್ದುಗೊಳಿಸಬೇಕಾದಲ್ಲಿ ನಿರ್ವಹಣಾ ನ್ಯಾಯ ಮಂಡಳಿಯನ್ನು ಉಪಯೋಗಿಸಿಕೊಳ್ಳುವ ಹಕ್ಕು ಎಲ್ಲ ಹಿರಿಯ ನಾಗರೀಕರಿಗಿದೆ.

ನಿರ್ವಹಣಾ ನ್ಯಾಯಾಧೀಕರಣ ಮಂಡಳಿ (ಟ್ರಿಬ್ಯುನಲ್) ಪ್ರಾರಂಭವಾದಾಗಿನಿಂದ ಇದುವರೆಗೂ 464 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಶೇ.50ರಷ್ಟು ದಾನ ಪತ್ರ ರದ್ದುಗೊಳಿಸುವಿಕೆ ಹಾಗೂ ಶೇ.42ರಷ್ಟು ದೂರುಗಳು ಜೀವನಾಂಶಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕರ ಪರವಾಗಿ ಇತ್ಯರ್ಥವಾಗಿರುತ್ತವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ