ಪ್ರಕರಣ ಬಯಲಾಗುವ ಮೊದಲೇ ಯುಎಇಗೆ ಪರಾರಿಯಾಗಿರುವ ಐಎಂಎ ಮಾಲೀಕ

ಬೆಂಗಳೂರು, ಜೂ.14-ಸಾವಿರಾರು ಜನರಿಗೆ ನೂರಾರು ಕೋಟಿ ವಂಚನೆ ಮಾಡಿದ ಆರೋಪಕ್ಕೆ ಸಿಲುಕಿರುವ ಐಎಂಎ ಜ್ಯುವೆಲ್ಸ್‍ನ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಪ್ರಕರಣ ಬಯಲಾಗುವ ಮೊದಲೇ ಕುಟುಂಬ ಸಮೇತ ಶನಿವಾರ ದುಬೈಗೆ ಪರಾರಿಯಾಗಿದ್ದಾನೆ.

ಜೂನ್ 8 ರಂದು ಶನಿವಾರ ಸಂಜೆ 8.45ರಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ಗೆ ಸೇರಿದ ವಿಮಾನದಲ್ಲಿ ಪತ್ನಿ-ಮಕ್ಕಳು ಸಮೇತ ಮನ್ಸೂರ್‍ಖಾನ್ ದುಬೈಗೆ ಹಾರಿರುವುದನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ) ಪತ್ತೆಹಚ್ಚಿದೆ.

ವಿಮಾನ ನಿಲ್ದಾಣದ ವಲಸೆ ವಿಭಾಗದ (ಇಮಿಗ್ರೇಷನ್ ಸೆಕ್ಷನ್)ಲ್ಲಿ ಶನಿವಾರ ಸಂಜೆ ದುಬೈಗೆ ಯಾರ್ಯಾರು ಹೋಗಿದ್ದಾರೆ ಎಂಬ ವಿವರಗಳನ್ನು ಅಧಿಕಾರಿಗಳು ಎಸ್‍ಐಟಿ ತನಿಖಾ ತಂಡಕ್ಕೆ ನೀಡಿದ್ದಾರೆ.

ಶನಿವಾರ ಮನ್ಸೂರ್ ಖಾನ್‍ಕುಟುಂಬ ಸಮೇತ ರೇಂಜ್ ರೋವರ್ ಕಾರಿನಲ್ಲಿ ನಿಲ್ದಾಣಕ್ಕೆ ಬಂದಿದ್ದು, ಬಳಿಕ ಈ ಕಾರನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದ. ಸುಮಾರು 5 ದಿನಗಳಾದರೂ ಕಾರು ಅಲ್ಲಿಯೇ ಇದ್ದುದ್ದರಿಂದ ಅನುಮಾನಗೊಂಡ ಭದ್ರತಾ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದರು. ನಂತರ ಇದು ಮನ್ಸೂರ್ ಖಾನ್‍ನದ್ದೇ ಎಂಬುದು ತಿಳಿದುಬಂದಿದೆ.

15 ದಿನಗಳಿಂದ ತಯಾರಿ: ಕುಟುಂಬ ಸಮೇತ ದುಬೈಗೆ ಹಾರಲು ಮನ್ಸೂರ್ ಖಾನ್ ಸುಮಾರು 15 ದಿನಗಳಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದ.

ವ್ಯಾಪಾರದಲ್ಲಿ ಭಾರೀ ನಷ್ಟ ಉಂಟಾಗಿದ್ದರಿಂದ ಹೂಡಿಕೆದಾರರಿಗೆ ಹಣ ಹಿಂತಿರುಗಿಸಲು ಸಾಧ್ಯವಾಗಿಲ್ಲ ಎಂಬುದು ಆತನಿಗೆ ಮನವರಿಕೆಯಾಗಿತ್ತು.

ಇನ್ನು ಬೆಂಗಳೂರಿನಲ್ಲೇ ಉಳಿದರೆ ಹೂಡಿಕೆದಾರರು ನನ್ನನ್ನು ಬಿಡುವುದಿಲ್ಲ. ಅಲ್ಲದೆ ಪೊಲೀಸರು ಬಂಧಿಸಬಹುದೆಂಬ ಭೀತಿ ಆತನನ್ನು ಕಾಡುತ್ತಿತ್ತು. ಹೀಗಾಗಿಯೇ ಬೆಂಗಳೂರಿನ ಸಹವಾಸವೇ ಬೇಡವೆಂಬ ಅಚಲ ತೀರ್ಮಾನಕ್ಕೆ ಬಂದ ಮನ್ಸೂರ್ ಖಾನ್ ಕುಟುಂಬ ಸಮೇತ ದುಬೈಗೆ ಹೊರಡಲು ಮಾನಸಿಕವಾಗಿ ಸಿದ್ಧನಾಗಿದ್ದ.

ದುಬೈನಲ್ಲಿ ಜೀವನ ನಿರ್ವಹಣೆಗೆ ಹಣ ಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಕೊನೆ ಕ್ಷಣದಲ್ಲಿ ಸಾಕಷ್ಟು ಹಣವನ್ನು ಬ್ಯಾಂಕ್‍ನಿಂದ ಡ್ರಾ ಮಾಡಿಕೊಂಡಿರುವುದೂ ಸಹ ಬೆಳಕಿಗೆ ಬಂದಿದೆ.

ಅಂಗಡಿಯಲ್ಲಿದ್ದ ಬೆಲೆಬಾಳುವ ಬಂಗಾರ ಹಾಗೂ ವಜ್ರದ ಆಭರಣಗಳನ್ನು ಗೌಪ್ಯವಾಗಿ ಬೇರೊಂದು ಕಡೆ ಮಾರಾಟ ಮಾಡಿದ್ದ. ಸರಿಸುಮಾರು 1200 ಕೋಟಿಗೂ ಹೆಚ್ಚು ಹೂಡಿಕೆ ಮಾಡಿಕೊಂಡಿದ್ದ ಮನ್ಸೂರ್ ಖಾನ್‍ಗೆ ಯಾವಾಗ ಹಿಂತಿರುಗಿಸುವುದು ಸಾಧ್ಯವಿಲ್ಲವೆಂಬುದು ದಿಟವಾಯಿತೋ ತಕ್ಷಣವೇ ಆತ್ಮಹತ್ಯೆಯ ನಾಟಕ ಆರಂಭಿಸಿದ.

ನನಗೆ ಕೆಲವರು ಒತ್ತಡ ಹೇರಿ ಹಣವನ್ನು ಪಡೆದಿದ್ದಾರೆ. ರೌಡಿಗಳು ತಮ್ಮ ಕಚೇರಿಗೆ ಬಂದು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ.ಗ್ರಾಹಕರಿಗೆ ಎಲ್ಲಾ ಹಣವನ್ನು ಹಿಂತಿರುಗಿಸುತ್ತೇನೆ. ಯಾರೊಬ್ಬರೂ ಆತಂಕಕ್ಕೆ ಒಳಗಾಗಬಾರದು ಎಂದು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ.

ಮೊಹಮ್ಮದ್ ಮನ್ಸೂರ್ ಖಾನ್ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮುನ್ನವೇ ಆತ ಸುರಕ್ಷಿತವಾಗಿ ದುಬೈನಲ್ಲಿ ನೆಲೆಯೂರಿದ್ದ. ಹಣ ಹೂಡಿದ್ದ ಗ್ರಾಹಕರು ಬಾಯಿ ಬಾಯಿ ಬಡಿದುಕೊಳ್ಳುವುದಷ್ಟೇ ಬಾಕಿ ಇತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ