ಇಸ್ರೇಲ್ ಕೃಷಿ ಪದ್ಧತಿ-ರೈತರಿಗೆ ಆಸಕ್ತಿಯಿದ್ದರೆ ಬಳಸಿಕೊಳ್ಳಬಹುದು

ಬೆಂಗಳೂರು, ಜೂ.14-ಮುಂಗಾರು ಮಳೆ ಹಿನ್ನೆಲೆಯಿಂದಾಗಿ ಈ ಬಾರಿ ಬಿತ್ತನೆ ಕಾರ್ಯ ಚುರುಕಾಗಿ ನಡೆದಿಲ್ಲ ಎಂದು ಕೃಷಿ ಸಚಿವ ಶಿವಶಂಕರ್‍ರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈವರೆಗೂ ಶೇ.8ರಷ್ಟು ಮಾತ್ರ ಬಿತ್ತನೆಯಾಗಿದೆ.ಶೇ.33ರಷ್ಟು ಮಳೆ ಕೊರತೆ ಇದೆ.ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಸುರಿಯುವ ನಿರೀಕ್ಷೆಗಳಿವೆ ಎಂದು ಹೇಳಿದರು.

ರಾಜ್ಯ ಸಮ್ಮಿಶ್ರ ಸರ್ಕಾರ ಇಸ್ರೇಲ್ ಕೃಷಿ ಪದ್ಧತಿಯನ್ನು ನಾಲ್ಕು ಜಿಲ್ಲೆಗಳಲ್ಲಿ ಶೀಘ್ರವಾಗಿ ಪ್ರಾಯೋಗಿಕವಾಗಿ ಜಾರಿಗೊಳಿಸಲಿದೆ. ಕೊಪ್ಪಳ, ಕೋಲಾರ, ಚಿತ್ರದುರ್ಗ, ಗದಗ ಜಿಲ್ಲೆಗಳಲ್ಲಿ ಆರಂಭಗೊಳ್ಳುವ ಇಸ್ರೇಲ್ ಕೃಷಿ ಪದ್ಧತಿಗೆ ಬಜೆಟ್‍ನಲ್ಲಿ ಸಾಕಷ್ಟು ಹಣ ನಿಗದಿ ಮಾಡಲಾಗಿದೆ.ಇದಕ್ಕೆ ತಕ್ಕಂತೆ ಗುತ್ತಿಗೆ ಕೃಷಿ ಪದ್ಧತಿಯನ್ನು ರೂಪಿಸಲಾಗುವುದು, ಅಗತ್ಯವಾದ ಕಾನೂನುಗಳನ್ನು ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.

ಇಸ್ರೇಲ್ ಪದ್ಧತಿಯಲ್ಲಿ ಗುಂಪು ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಆದರೆ ಯಾರ ಮೇಲೂ ಬಲವಂತವಾಗಿ ಒತ್ತಡ ಹಾಕುವುದಿಲ್ಲ. ರೈತರಿಗೆ ಆಸಕ್ತಿ ಇದ್ದರೆ ಬಳಸಿಕೊಳ್ಳಬಹುದು.ವೈಯಕ್ತಿಕ ಸಬ್ಸಿಡಿಗಿಂತಲೂ ಗುಂಪು ಕೃಷಿಯಲ್ಲಿ ಹೆಚ್ಚಿನ ಆರ್ಥಿಕ ನೆರವು ಸಿಗಲಿದೆ. ಹನಿ ನೀರಾವರಿ ಬಳಕೆ, ವಿಮೆ ಸೇರಿದಂತೆ ಹಲವಾರು ಸೌಲಭ್ಯಗಳು ಗುಂಪು ಕೃಷಿ ಮಾಡುವವರಿಗೆ ಹೆಚ್ಚಿನ ನೆರವು ನೀಡಲಿದೆ.

ರಾಜ್ಯ ಸರ್ಕಾರ ಸಬ್ಸಿಡಿ ಕೃಷಿ ಯಂತ್ರೋಪಕರಣ ಯೋಜನೆಯನ್ನು ಮುಂದುವರೆಸಿದ್ದು, ಇದಕ್ಕಾಗಿ 441 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಕೃಷಿ ಹೊಂಡಕ್ಕೆ 250 ಕೋಟಿ, ಮಣ್ಣು ಆರೋಗ್ಯ ಕಾರ್ಡ್ 3ನೇ ಹಂತದ ಯೋಜನೆಯಲ್ಲಿ 15 ಕೋಟಿ ಖರ್ಚು ಮಾಡಲಾಗುತ್ತಿದ್ದು, ಸುಮಾರು 75 ಲಕ್ಷ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ಮಾಡಿಕೊಡುವ ಗುರಿ ಇದೆ ಎಂದು ಹೇಳಿದರು.

ಶೂನ್ಯ ಬಂಡವಾಳ ಕೃಷಿಗೂ ಹೆಚ್ಚಿನ ನೆರವು ನೀಡಲಾಗುತ್ತಿದೆ.ಈ ವರ್ಷ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ