ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ: 120ಕ್ಕೂ ಅಧಿಕ ವೈದ್ಯರ ರಾಜಿನಾಮೆ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರ ತೀವ್ರ ಸ್ಪರೂಪ ಪಡೆದುಕೊಂಡಿದ್ದು, ಕಿರಿಯ, ಹಿರಿಯ ವೈದ್ಯರು ಹಾಗೂ ಪ್ರಾಧ್ಯಾಪಕರು ಸೇರಿದಂತೆ 120ಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ನೀಡಿದ್ದಾರೆ.

ವೈದ್ಯರ ಸಾಮೂಹಿಕ ಮುಷ್ಕರ ಹಾಗೂ ರಾಜೀನಾಮೆಯಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರದ ಮಧ್ಯ ಪ್ರವೇಶದಿಂದಲೂ ತೃಪ್ತರಾಗದ ವೈದ್ಯರು ಪ್ರತಿಭಟನೆ ಮುಂದುವರೆಸಿದ್ದಾರೆ.

ಇಂದು ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಸೇರಿದಂತೆ ಪಶ್ಚಿಮ ಬಂಗಾಳ ವಿವಿಧೆಡೆಯಿಂದ ಸುಮಾರು 120 ವೈದ್ಯರು ತಮ್ಮ ಸೇವೆಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಈ ವರೆಗೂ ನಾವು ನಮ್ಮ ಶಕ್ತಿ ಮೀರಿ ಸೇವೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಆಸ್ಪತ್ರೆಯಲ್ಲಿ ಕಾರ್ಯ ಚಟುವಟಿಕೆಗಳ ಮೇಲೆ ಧಕ್ಕೆಯಾಗದಂತೆ ಮುಂಜಾಗ್ರತೆ ವಹಿಸಿದ್ದೆವು, ಆದರೆ ಪ್ರಸ್ತುತ ಪರಿಸ್ಥಿತಿ ತೀವ್ರಗೊಂಡಿದ್ದು, ನಾವು ನಮ್ಮ ಕರ್ತವ್ಯ ಮುಂದುವರೆಸುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ನಾವು ನಮ್ಮ ಸೇವೆಗೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದು, ಕಳೆದ ಬುಧವಾರ ಎಸ್ಎಸ್ ಕೆಎಂ ಆಸ್ಪತ್ರೆಗೆ ಭೇಟಿ ನೀಡಿದ್ದ ಪಶ್ಚಿಮ ಮಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಷ್ಕರ ಹಿಂಪಡೆಯದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಇದಕ್ಕೆ ಜಗ್ಗದ ವೈದ್ಯರು ತಮಗೆ ‘ರಕ್ಷಣೆ ಮತ್ತು ನ್ಯಾಯ’ ಒದಗಿಸುವ ವರೆಗೂ ಕರ್ತವ್ಯಕ್ಕೆ ಮರಳುವುದಿಲ್ಲ ಎಂದು ಘೋಷಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ