ಬಿಷ್ಕೆಕ್: ಕಿರ್ಗಿಸ್ತಾನ್ ರಾಜಧಾನಿಯಲ್ಲಿ ನಡೆದ ಎಸ್ಸಿಒ ಶೃಂಗಸಭೆಯ ಉದ್ಘಾಟನಾ ಸಮಾರಂಭದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಮತ್ತೆ ರಾಜತಾಂತ್ರಿಕ ಶಿಷ್ಟಾಚಾರ ಮುರಿದ ಘಟನೆ ನಡೆದಿದೆ.
ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಶೃಂಗಸಭೆಯ ಉದ್ಘಾಟನಾ ಸಮಾರಂಭದ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟ್ಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸಭಾಂಗಣಕ್ಕೆ ಪ್ರವೇಶಿಸುವ ಇತರೆ ಎಲ್ಲ ದೇಶಗಳ ಮುಖ್ಯಸ್ಥರನ್ನು ಎದ್ದು ನಿಂತುಕೊಂಡೆ ಸ್ವಾಗತಿಸುತ್ತಿದ್ದರು. ಆದರೆ ಇಮ್ರಾನ್ ಖಾನ್ ಎದ್ದು ನಿಂತು ಸ್ವಾಗತಿಸದೇ ಕುಳಿತಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ, ಎಲ್ಲಾ ದೇಶಗಳ ಮುಖ್ಯಸ್ಥರು ಒಬ್ಬೊಬ್ಬರಾಗಿ ಸಭಾಂಗಣದ ಒಳಗೆ ಪ್ರವೇಶಿಸುತ್ತಿದ್ದರು. ಈ ಸಮಯದಲ್ಲಿ ಇತರ ದೇಶದ ಎಲ್ಲಾ ನಾಯಕರು ಎದ್ದು ನಿಂತು ಚಪ್ಪಾಳೆಯೊಂದಿಗೆ ಸ್ವಾಗತಿಸುತ್ತಿದ್ದಾರೆ. ಆದಾಗ್ಯೂ, ಈ ಅವಧಿಯಲ್ಲಿ ಇಮ್ರಾನ್ ಖಾನ್ ಕುರ್ಚಿಯಲ್ಲಿ ಕುಳಿತೇ ಇದ್ದರು.
ಸ್ವಲ್ಪ ಸಮಯದ ಬಳಿಕ ಇತರ ದೇಶದ ನಾಯಕರು ನಿಂತಿದ್ದು, ತಾವೊಬ್ಬರೇ ಕುಳಿತಿರುವುದನ್ನು ಗಮನಿಸಿದ ಇಮ್ರಾನ್ ಖಾನ್ ತಕ್ಷಣ ಎದ್ದು ನಿಂತಿದ್ದಾರೆ.
ಈ ಹಿಂದೆ ಸೌದಿ ಅರೆಬಿಯಾದಲ್ಲಿ ನಡೆದ 14ನೇ ಒಐಸಿ ಶಂಗಸಭೆಯಲ್ಲೂ ಇಮ್ರಾನ್ ಖಾನ್ ರಾಜತಾಂತ್ರಿಕ ಶಿಷ್ಟಾಚಾರ ಬ್ರೇಕ್ ಮಾಡಿದ್ದರು.
Pakistan PM Imran Khan breaks diplomatic protocol at SCO summit