ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಜೂನ್ 17ರಿಂದ ಆರಂಭವಾಗುತ್ತಿದ್ದು, ಜೂನ್ 16ರಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಹೊಸ ಸರ್ಕಾರದ ಮೊದಲ ಅಧಿವೇಶನ ಜೂನ್ 17ರಿಂದ ಜುಲೈ 26ರವರೆಗೆ ನಡೆಯಲಿದೆ.ಮೊದಲ ಬಜೆಟ್ ಜುಲೈ 5ರಂದು ಮಂಡನೆಯಾಗಲಿದೆ.
ಜೂನ್ 16ರಂದು ಭಾನುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಜೂನ್ 16ರಂದು ಸಂಜೆ ಸಂಸತ್ತಿನಲ್ಲಿ ಬಿಜೆಪಿ ಸಂಸದೀಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು ಸದನ ಕಾರ್ಯತಂತ್ರಗಳ ಕುರಿತು ಎನ್ ಡಿಎ ಮೈತ್ರಿಕೂಟ ಚರ್ಚೆ ನಡೆಸಲಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದ್ದು ಈ ಅಧಿವೇಶನದಲ್ಲಿ ತ್ರಿವಳಿ ತಲಾಖ್, ಆಧಾರ್ ತಿದ್ದುಪಡಿ, ಕಂಪೆನಿ ಕಾಯ್ದೆ ತಿದ್ದುಪಡಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಗಳು ಸೇರಿದಂತೆ 10 ಹೊಸ ವಿಧೇಯಕಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
ಈ ಮಧ್ಯೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರುಗಳಾದ ನರೇಂದ್ರ ಸಿಂಗ್ ತೊಮರ್, ಅರ್ಜುನ್ ರಾಮ್ ಮೆಘವಾಲ್ ಅವರು ನಿನ್ನೆ ದೆಹಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಸಂಸತ್ತಿನ ಸುಗಮ ಕಲಾಪಕ್ಕೆ ಸಹಕಾರ ನೀಡುವಂತೆ ಕೋರಿದರು.
Monsoon Parliament session that begins June 17th