ಬೆಂಗಳೂರು,ಜೂ.12-ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ರಾಜಕೀಯವಾಗಿ ಕಡೆಗಣಿಸಿದರೆ ಈ ಬಾರಿ ಬಿಬಿಎಂಪಿಯ ಮೇಯರ್ ಸ್ಥಾನ ಕಾಂಗ್ರೆಸ್ ಕೈತಪ್ಪುವ ಸಾಧ್ಯತೆಗಳಿವೆ.
ಬೆಂಗಳೂರು ಮಹಾನಗರ ರಾಜಕೀಯದಲ್ಲಿ ಯಾರೇ ಸಚಿವರಾದರೂ ರಾಮಲಿಂಗಾರೆಡ್ಡಿ ಅವರೇ ಅದ್ವಿತೀಯ ನಾಯಕ. ಬೆಂಗಳೂರಿನಲ್ಲಿ ಯಾವುದೇ ಚುನಾವಣೆಗಳಾದರೂ ರೆಡ್ಡಿ ಅವರ ಪ್ರಭಾವ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.
ಬಿಬಿಎಂಪಿಯ ಕಾಂಗ್ರೆಸ್ ಸದಸ್ಯರು ರಾಮಲಿಂಗಾರೆಡ್ಡಿ ಅವರ ಮಾತಿಗೆ ಹೆಚ್ಚು ಗೌರವ ಕೊಡುತ್ತಾರೆ. ಈವರೆಗೂ ಬಿಬಿಎಂಪಿಯಲ್ಲಿ ಮೇಯರ್ ಆಯ್ಕೆ ವೇಳೆ ರೆಡ್ಡಿ ಅವರ ಮಾತೇ ಅಂತಿಮ. ಅವರ ಕಾರ್ಯತಂತ್ರವೇ ಯಶಸ್ವಿ ಎಂಬ ಮಾತುಗಳು ಚಾಲ್ತಿಯಲ್ಲಿವೆ.
ರಾಮಲಿಂಗಾರೆಡ್ಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಸಚಿವರಾಗುತ್ತಿದ್ದರು. ಕಳೆದ ಸರ್ಕಾರದಲ್ಲಿ ಗೃಹಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಲ್ಲದೆ ಸರಳತೆಯ ಸಚಿವ ಎಂಬ ಖ್ಯಾತಿಗೂ ಹೆಸರಾಗಿದ್ದರು. ಆದರೆ ರಾಜಕೀಯ ಏರಿಳಿತಗಳಲ್ಲಿ ಈ ಬಾರಿ ರಾಮಲಿಂಗಾರೆಡ್ಡಿ ಅವರನ್ನು ಅಧಿಕಾರದಿಂದ ದೂರವಿಡಲಾಗಿದೆ.
ಕಾಂಗ್ರೆಸ್ ಪಕ್ಷದ ಸಂಘಟನೆ, ಚುನಾವಣೆಗಳು ಬಂದಾಗ ರಾಮಲಿಂಗಾರೆಡ್ಡಿ ಅನಿವಾರ್ಯವಾಗುತ್ತಾರೆ. ಆದರೆ ಅಧಿಕಾರ ಹಂಚಿಕೆ ವಿಚಾರ ಬಂದಾಗ ಮೂಲೆಗುಂಪಾಗುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಬಾರಿ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ಬೆಂಗಳೂರಿನಲ್ಲಿ ಬಿಬಿಎಂಪಿಯ ಬಹಳಷ್ಟು ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಹಿರಿಯರನ್ನು ಸಚಿವ ಸಂಪುಟದಿಂದ ದೂರವಿಡಲಾಗಿದೆ ಎಂಬ ವಾದ ಮಾಡುತ್ತಲೇ, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಯು.ಟಿ.ಖಾದರ್, ಕೃಷ್ಣಭೆರೇಗೌಡ ಅವರಿಗೆ ಅಧಿಕಾರ ನೀಡಲಾಗಿದೆ. ಆದರೆ ರಾಮಲಿಂಗಾರೆಡ್ಡಿ ಅವರ ವಿಷಯ ಬಂದಾಗ ಮಾತ್ರ ಈ ರೀತಿಯ ತಾರತಮ್ಯ, ಮಲತಾಯಿಧೋರಣೆ ತೋರಲಾಗುತ್ತದೆ ಎಂಬ ಆರೋಪಗಳನ್ನು ಬೆಂಬಲಿಗರು ಮಾಡುತ್ತಿದ್ದಾರೆ.
ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ನಂತರ ಕಾಂಗ್ರೆಸ್ಗೆ ಸಮರ್ಥ ನಾಯಕರು ಬೇಕಾಗಿದೆ. ಹಿರಿಯರನ್ನು ಸಂಪುಟಕ್ಕೆ ತೆಗೆದುಕೊಂಡು ಅನುಭವವನ್ನು ಬಳಸಿಕೊಳ್ಳದಿದ್ದರೆ ಪಕ್ಷಕ್ಕೆ ನಷ್ಟವಾಗಲಿದೆ ಎಂಬ ಅಭಿಪ್ರಾಯಗಳನ್ನು ಬೆಂಬಲಿಗರು ವ್ಯಕ್ತಪಡಿಸುತ್ತಿದ್ದಾರೆ.
ಮೇಯರ್ ಚುನಾವಣೆ ಸಮೀಪಿಸತ್ತಿದ್ದು, 4ನೇ ಅವಧಿಗೆ ಮತ್ತೆ ಕಾಂಗ್ರೆಸ್ನವರೇ ಮೇಯರ್ ಆಗಬೇಕೆಂದಾದರೆ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದರೆ ಪಕ್ಷೇತರರು ಕೈಗೆ ಸಿಗುವುದಿಲ್ಲ, ಕಾಂಗ್ರೆಸ್ನ ಬಹಳಷ್ಟು ಸದಸ್ಯರು ತಟಸ್ಥವಾಗಿ ಉಳಿದು, ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ.
ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಸಹಜವಾಗಿ ಅದು ಮೈತ್ರಿ ಸರ್ಕಾರದ ಅಸ್ತಿತ್ವದ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ.