ಬೆಂಗಳೂರು, ಜೂ.11-ತಮ್ಮ ಇಲಾಖೆಯ ಯೋಜನೆಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಖಾಸಗಿ ಸಂಸ್ಥೆಗಳಿಗೆ ವಹಿಸುತ್ತಿಲ್ಲ. ಇಲಾಖೆಯಲ್ಲಿಯೇ ಸಿದ್ಧಪಡಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್‍ಗಳಿಗೆ ಸರಿಯಾದ ವಾಹನವಿಲ್ಲ. ಅಗತ್ಯ ಸಿಬ್ಬಂದಿಯೂ ಇಲ್ಲ. ಸುಮಾರು ಒಂದು ಸಾವಿರ ಸಹಾಯಕ ಇಂಜಿನಿಯರ್‍ಗಳ ಹುದ್ದೆ ಇದ್ದು, ಭರ್ತಿ ಮಾಡಲು ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ 76,059 ಕಿಲೋಮೀಟರ್ ಉದ್ದದ ರಸ್ತೆಗಳಿವೆ. ಸುಮಾರು 10 ಸಾವಿರ ಕೋಟಿ ರೂ. ರಸ್ತೆ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 4,500 ಕಿಲೋಮೀಟರ್ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ಮೂರು ಪ್ಯಾಕೇಜ್‍ಗಳಲ್ಲಿ 7961 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. ಜಿಎಸ್‍ಟಿಯಿಂದಾಗಿ ಯೋಜನಾ ವೆಚ್ಚ ಹೆಚ್ಚಾಗಿದೆ. ಸುಮಾರು 900 ಕೋಟಿ ರೂ.ಹೆಚ್ಚುವರಿ ವೆಚ್ಚದ ಬಗ್ಗೆ ಮಾಹಿತಿ ನೀಡಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ಕಳೆದೊಂದು ವರ್ಷದಲ್ಲಿ ಎರಡು ಮೂರು ಸಭೆಗಳನ್ನು ನಡೆಸಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ, ಅರಣ್ಯ, ವಿದ್ಯುತ್ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗಿದೆ.ಅಲ್ಲದೆ ಪ್ರತಿ ತಿಂಗಳು ರಾಜ್ಯಸರ್ಕಾರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.
ನಮ್ಮ ಇಲಾಖೆಯಲ್ಲಿ ಹಣ ಪೋಲು ಮಾಡಲು ಅವಕಾಶವಿಲ್ಲ. ರೋಡ್‍ಮ್ಯಾಪ್ ಸೇರಿದಂತೆ ಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಒದಗಿಸಲಾಗುವುದು ಎಂದರು.