ಕೋಲ್ಕತ: ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಪ್ರಚೋಚನೆ ನೀಡುತ್ತಿದೆ. ಈ ಮೂಲಕ ರಾಜ್ಯ ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಬಿಜೆಪಿ ಕೋಟ್ಯಂತರ ರೂ. ವ್ಯಯಿಸುತ್ತಿದೆ. ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಇದು ಯೋಜಿತ ಹಿಂಸಾಚಾರ. ದೇಶದಲ್ಲಿ ಬಿಜೆಪಿ ವಿರುದ್ಧ ಧ್ವನಿಯೆತ್ತುತ್ತಿರುವ ಏಕೈಕ ವ್ಯಕ್ತಿ ನಾನು ಎಂಬುದು ಅವರಿಗೆ ತಿಳಿದಿದೆ. ಹಾಗಾಗಿ ನನ್ನ ಧ್ವನಿಯನ್ನು ಅಡಗಿಸಲು ಅವರು ಈ ಯೋಜನೆ ರೂಪಿಸಿದ್ದಾರೆ. ರಾಜ್ಯ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಸಂಚು ರೂಪಿಸುತ್ತಿದೆ. ಆದರೆ, ಬಿಜೆಪಿ ಇದರಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿ ಜತೆಗಿನ ಚುನಾವಣೆ ಮೈತ್ರಿಯನ್ನು ಬಿಹಾರಕ್ಕೆ ಸೀಮಿತಗೊಳಿಸಲು ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಿರ್ಧರಿಸಲಾಗಿದ್ದು ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ ನಿತೀಶ್ ಕುಮಾರ್ ಅವರು ಬಿಹಾರದ ಹೊರಗೆ ಎನ್ಡಿಎ ಜತೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿದ್ದಾರೆ. ಅವರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ. ನಿತೀಶ್ ಕುಮಾರ್ ಅವರಿಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ