ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ರಾಜಕೀಯ ಗಿಮಿಕ್-ಬಿಜೆಪಿ ಯುವ ಮೋರ್ಚಾ

ಬೆಂಗಳೂರು, ಜೂ.10-ಈವರೆಗೂ ಜನತೆಯ ಸಮಸ್ಯೆಗಳನ್ನು ನಿರ್ಲಕ್ಷಿಸಿ ಪಂಚತಾರಾ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ ಗ್ರಾಮ ವಾಸ್ತವ್ಯಕ್ಕೆ ಹೊರಟಿರುವುದು ರಾಜಕೀಯ ಗಿಮಿಕ್ ಎಂದು ಬಿಜೆಪಿ ಯುವ ಮೋರ್ಚಾ ಕುಹಕವಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಮುಖಂಡರಾದ ಬಿ.ವೈ.ವಿಜಯೇಂದ್ರ, ಸಪ್ತಗಿರಿ ಗೌಡ ಮತ್ತು ತಮ್ಮೇಶ್‍ಗೌಡ ಅವರು ಸರ್ಕಾರದ ವೈಫಲ್ಯದ ವಿರುದ್ಧ ಕಿಡಿಕಾರಿದರು.

ಯುವ ಮೋರ್ಚಾ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿ, ತಾಜ್‍ವೆಸ್ಟ್ ಎಂಡ್ ಹೊಟೇಲ್‍ನಲ್ಲಿ ಒಂದು ವರ್ಷದಿಂದ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿಗೆ ರಾಜ್ಯದ ಜನತೆಯ ಸಮಸ್ಯೆಗಳು ಗೊತ್ತಿರಲಿಲ್ಲವೇ? ಈಗ ಏಕಾಏಕಿ ಗ್ರಾಮ ವಾಸ್ತವ್ಯ ಮಾಡಲು ಹೊರಟಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕುಮಾರಸ್ವಾಮಿಗೆ ಈಗ ಜ್ಞಾನೋದಯವಾಗಿರುವುದು ಸಂತಸದ ವಿಷಯ. ಅದರಲ್ಲೂ ಮಂಡ್ಯದಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ತುಮಕೂರಿನಲ್ಲಿ ತಂದೆ ದೇವೇಗೌಡರು ಪರಾಭವಗೊಂಡಿದ್ದಾರೆ. ಇದರಿಂದ ಮುಜುಗರಕ್ಕೆ ಒಳಗಾಗಿರುವ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ನಾಟಕ ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದರು.

ಯಾರಿಗೇ ಆಗಲಿ ತಮ್ಮ ಪುತ್ರ ಚುನಾವಣೆಯಲ್ಲಿ ಸೋತಾಗ ನೋವು ಉಂಟಾಗುವುದು ಸಹಜ. ಅದರಲ್ಲೂ ಕುಮಾರಸ್ವಾಮಿಯವರಿಗೆ ತಂದೆ-ಮಗ ಇಬ್ಬರೂ ಸೋತಿರುವುದರಿಂದ ಬಹಳ ನೋವುಂಟಾಗಿದೆ. ಹಾಗೆಂದು ಮಾಧ್ಯಮದ ವಿರುದ್ಧ ಹರಿಹಾಯುವುದು ಇಲ್ಲವೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸರಿಯೇ ಎಂದು ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬರಗಾಲವಿದ್ದರೂ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರವಾಸವನ್ನೇ ಕೈಗೊಂಡಿಲ್ಲ. ವಿಧಾನಸೌಧ ಈಗಲೂ ನಿದ್ರಾವಸ್ಥೆಯಲ್ಲಿದೆ ಎಂದು ವ್ಯಂಗ್ಯವಾಡಿದರು.

ಸರ್ಕಾರದ ವಿರುದ್ಧ ಜೂ.13 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೆವು.ಆದರೆ ನಾಡಿನ ಮೇರು ಪ್ರತಿಭೆ ಗಿರೀಶ್ ಕಾರ್ನಾಡ್‍ರ ನಿಧನದ ಹಿನ್ನೆಲೆಯಲ್ಲಿ ಹೋರಾಟವನ್ನು ಮುಂದೂಡಲಾಗಿದೆ. ಸಂತಾಪದ ಸಂದರ್ಭದಲ್ಲಿ ಹೋರಾಟ ನಡೆಸುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ