ಬೆಂಗಳೂರು, ಜೂ.9- ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ನಿರ್ಲಕ್ಷಿಸಿ ಸಂಪುಟ ಪುನಾರಚನೆ ಬದಲಾಗಿ ವಿಸ್ತರಣೆಗಷ್ಟೇ ಸೀಮಿತಗೊಳಿಸಿರುವುದರಿಂದ ಅತೃಪ್ತ ಶಾಸಕರ ಬೇಗುದಿ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವಾಗ ಬೇಕಾದರೂ ಸ್ಫೋಟಿಸಿ ಸರ್ಕಾರಕ್ಕೆ ಕಂಟಕವಾಗುವ ಸಾಧ್ಯತೆಗಳಿವೆ.
ಕಾಂಗ್ರೆಸ್ನಲ್ಲಿ ಸುಮಾರು ಎರಡು ಡಜನ್ಗೂ ಹೆಚ್ಚು ಮಂದಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಿದ್ದಾರೆ.ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಗದಿದ್ದರೆ ನಮ್ಮ ರಾಜಕೀಯ ಭವಿಷ್ಯವೇ ಮುಗಿದುಹೋಗುತ್ತದೆ ಎಂಬ ತುಡಿತದಲ್ಲಿ ಬಹಳಷ್ಟು ಮಂದಿ ಆತಂಕಕ್ಕೊಳಗಾಗಿದ್ದಾರೆ.
ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್ ನಾಯಕರು ಬ್ಲಾಕ್ ಮೇಲ್ ರಾಜಕಾರಣ ಮಾಡುತ್ತಿರುವ ಇಬ್ಬರು ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಸಂಪುಟ ವಿಸ್ತರಣೆಗೆ ಕೈ ಹಾಕಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಕೊಟ್ಟು, ಇತ್ತ ಅಭಿವೃದ್ಧಿ ಕಾರ್ಯಗಳು ಆಗದೆ, ಅತ್ತ ಅಧಿಕಾರವೂ ಇಲ್ಲದೆ ದಿನನಿತ್ಯ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಕಾಂಗ್ರೆಸ್ ಶಾಸಕರನ್ನು ಕೇಳುವವರಿಲ್ಲದಂತಾಗಿದೆ.
ರಾಜ್ಯ ನಾಯಕರ ಈ ಅನಾಧಾರಣೆ, ನಿರ್ಲಕ್ಷ್ಯ ಮನೋಭಾವ ಅತೃಪ್ತ ಶಾಸಕರ ಪಿತ್ತವನ್ನು ನೆತ್ತಿಗೇರಿಸಿದೆ. ಕನಿಷ್ಠ ಕರೆದು ಸಮಾಧಾನ ಮಾಡುವ ಸೌಜನ್ಯವನ್ನೂ ಯಾವ ನಾಯಕರೂ ತೋರುತ್ತಿಲ್ಲ. ಬೇಕಿದ್ದರೆ ಇರಿ, ಇಲ್ಲವಾದರೆ ಹೋಗಿ ಎನ್ನುವ ಧೋರಣೆಯನ್ನು ಕಾಂಗ್ರೆಸ್ ನಾಯಕರು ಅನುಸರಿಸುತ್ತಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಡುವು ಮಾಡಿಕೊಂಡು ಕಾಂಗ್ರೆಸ್ ಅತೃಪ್ತರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಂದೆಡೆ ದೋಸ್ತಿ ಪಕ್ಷದ ನಾಯಕರು ಸಮಾಧಾನ ಪಡಿಸಿದರೆ, ಮತ್ತೊಂದೆಡೆ ಸ್ವಪಕ್ಷದ ನಾಯಕರು ಅತೃಪ್ತರನ್ನು ನಿರ್ಲಕ್ಷಿಸುತ್ತಿದ್ದಾರೆ.
ಇದರ ಪರಿಣಾಮವಾಗಿ ಈಗಾಗಲೇ ಬಹಳಷ್ಟು ಮಂದಿ ಹಿರಿಯ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷದ ನಾಯಕತ್ವವನ್ನು ಪ್ರಶ್ನಿಸಿದ್ದಾರೆ. ಆ ರೀತಿ ಹೇಳಿಕೆ ನೀಡಿದ ರೋಷನ್ಬೇಗ್ ವಿರುದ್ಧ ಕ್ರಮಕೈಗೊಂಡು ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆದಿವೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್ ವಿಷಯಾಧಾರಿತವಾಗಿ ಸಮ್ಮಿಶ್ರ ಸರ್ಕಾರದ ಹಗರಣಗಳನ್ನು, ಲೋಪದೋಷಗಳನ್ನು ಬಹಿರಂಗವಾಗಿ ಚರ್ಚಿಸಿ ಮುಜುಗರ ಉಂಟು ಮಾಡುತ್ತಿದ್ದಾರೆ. ಶಾಸಕ ಬಿ.ಸಿ.ಪಾಟೀಲ್ ಕಾಂಗ್ರೆಸ್ ನಾಯಕರು ತಮಗೆ ತೀವ್ರ ಅವಮಾನ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನವೇ ಬೇಡ. ಒಂದು ವೇಳೆ ಅವರಾಗಿಯೇ ಮನೆ ಬಾಗಿಲಿಗೆ ಬಂದು ಸ್ಥಾನ ಕೊಟ್ಟರೂ ನಾನು ಸಚಿವನಾಗುವುದಿಲ್ಲ ಎಂಬಷ್ಟು ಬೇಸರವನ್ನು ಹೊರಹಾಕಿದ್ದಾರೆ.
ಸುಮಾರು 15 ರಿಂದ 20ಕ್ಕೂ ಹೆಚ್ಚು ಶಾಸಕರು ಬಿಜೆಪಿ ಕರೆದರೆ ಪಕ್ಷಾಂತರ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಇಷ್ಟವಿಲ್ಲದ ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ಅತೃಪ್ತ ಶಾಸಕರ ವಲಸೆಗೆ ಹಸಿರು ನಿಶಾನೆ ತೋರುತ್ತಿಲ್ಲ. ಒಂದು ವೇಳೆ ಬಿಜೆಪಿ ಸರ್ಕಾರ ರಚಿಸಲು ಮುಂದಾಗಿ, ಆಪರೇಷನ್ ಕಮಲಕ್ಕೆ ಕೈ ಹಾಕಿದರೆ, ತೆಲಂಗಾಣ ಮಾದರಿಯಲ್ಲಿ ಕರ್ನಾಟಕ ಕಾಂಗ್ರೆಸ್ನಲ್ಲಿ ಮುಕ್ಕಾಲು ಭಾಗ ಶಾಸಕರು ಬಿಜೆಪಿಯತ್ತ ವಲಸೆ ಹೋದರೂ ಆಶ್ಚರ್ಯಪಡಬೇಕಿಲ್ಲ.
ಇತ್ತೀಚೆಗೆ ಪಕ್ಷಕ್ಕೆ ಬಂದ ವಲಸಿಗರು, ಸಂಘಟನೆ ಹಾಗೂ ಸರ್ಕಾರದ ಮೇಲೆ ಹಿಡಿತ ಸಾಧಿಸಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆ ಗುಂಪು ಮಾಡಿದ್ದಾರೆ. ಅತೃಪ್ತರು ಕಷ್ಟ ಹೇಳಿಕೊಳ್ಳಲು ಸೂಕ್ತ ವೇದಿಕೆ ಇಲ್ಲದಂತಾಗಿದೆ. ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಚುನಾವಣಾ ಪೂರ್ವದಲ್ಲಿ ತೋರಿಸುತ್ತಿದ್ದ ಕ್ರಿಯಾಶೀಲತೆಯನ್ನು ಈಗ ತೋರಿಸುತ್ತಿಲ್ಲ. ಎಲ್ಲಾ ಸಮಸ್ಯೆಗಳನ್ನೂ ಕೇಂದ್ರೀಕೃತ ನಾಯಕತ್ವದ ಬಳಿಯೇ ಹೇಳಿಕೊಳ್ಳಬೇಕು.
ಕೇಂದ್ರೀಕೃತ ನಾಯಕತ್ವ ತನ್ನ ಆಪ್ತರಿಗಷ್ಟೇ ಅವಕಾಶ ನೀಡುತ್ತಿದ್ದು, ಉಳಿದವರನ್ನು ಕಡೆಗಣಿಸುತ್ತಿದೆ. ಅಧಿಕಾರದಲ್ಲಿರುವ ಇತರರು ತಮಗೆ ಯಾವ ಉಸಾಬರಿ ಬೇಡ ಎಂಬ ಕಾರಣಕ್ಕಾಗಿ ಶಾಸಕರ ಕಷ್ಟಗಳನ್ನು ಕೇಳುವ ಗೋಜಿಗೆ ಹೋಗುತ್ತಿಲ್ಲ. ಇದು ಪಕ್ಷದಲ್ಲಿ ಗರಿಷ್ಠ ಮಟ್ಟದ ಬೇಗುದಿಯನ್ನು ಹುಟ್ಟುಹಾಕಿದೆ.
ಸಂಪುಟ ವಿಸ್ತರಣೆ ನಂತರ ಮತ್ತೊಂದು ಸುತ್ತಿನ ರಾಜಕೀಯ ವಿಪ್ಲವ ನಡೆಯುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಅವಕಾಶ ಸಿಕ್ಕರೆ ಬಹಳಷ್ಟು ಮಂದಿ ಶಾಸಕರು ಮುಲಾಜಿಲ್ಲದೆ ಅನ್ಯ ಪಕ್ಷಗಳತ್ತ ಜಿಗಿಯಲು ತಯಾರಾಗಿ ನಿಂತಿದ್ದಾರೆ.
ಯಾರು ಎಲ್ಲಿಗೇ ಹೋದರೂ ತಮ್ಮ ನಾಯಕತ್ವಕ್ಕೆ ಧಕ್ಕೆ ಇಲ್ಲ ಎಂಬ ಧೋರಣೆಯಲ್ಲಿ ಪಕ್ಷದ ನಾಯಕರು ಆರಾಮಾಗಿದ್ದಾರೆ.ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.