ನವದೆಹಲಿ, ಜೂ. 8- ಜಮ್ಮು-ಕಾಶ್ಮೀರ ಸೇರಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಗ್ಗಂಟಾಗಿರುವ ಎಲ್ಲಾ ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಚರ್ಚಿಸಿ ಪರಿಹಾರ ಕಂಡು ಕೊಳ್ಳೊಣ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಮುಂದಿನ ವಾರ ಕಜಖಿಸ್ತಾನದಲ್ಲಿ ನಡೆಯುವ ಬ್ರಿಕ್ಸ್ ಪ್ರಾದೇಶಿಕ ಸಮ್ಮೇಳನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ರೀತಿ ಮಾತುಕತೆ ಇಲ್ಲ ಎಂದು ಭಾರತ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿತ್ತು.
ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆದ್ದು, ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು, ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಆಹ್ವಾನಿಸದೆ. ಏಷ್ಯಾ ಉಪಖಂಡಗಳು ಮತ್ತು ಬ್ರಿಕ್ಸ್ನಲ್ಲಿರುವ ಪ್ರಮುಖ ರಾಷ್ಟ್ರಗಳನ್ನು ಆಹ್ವಾನಿಸಿದ್ದರು. ಇದು ಒಂದು ರೀತಿ ಜಾಗತೀಕವಾಗಿ ಪಾಕಿಸ್ತಾನವನ್ನು ಭಾರತ ಮೂಲೆಗುಂಪು ಮಾಡುವ ಕಾರ್ಯತಂತ್ರ ಎಂದೇ ಹೇಳಲಾಗಿತ್ತು. ಇದಕ್ಕೆ ಬೆದರಿರುವ ಪಾಕಿಸ್ತಾನ ಇದೀಗ ಪುನಃ ಭಾರತದ ಮುಂದೆ ಎರಡನೇ ಬಾರಿಗೆ ಮಾತುಕತೆಗೆ ದುಂಬಾಲು ಬಿದ್ದಿದೆ.
ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕಾಶ್ಮೀರ ಸಮಸ್ಯೆ ಸೇರಿದಂತೆ ಉಭಯ ರಾಷ್ಟ್ರಗಳ ನಡುವೆ ಇರುವ ಸಮಸ್ಯೆಗಳನ್ನು ಮಾತುಕತೆ ನಡೆಸಿ ಶಾಂತಿ ಸ್ಥಾಪಿಸೋಣ ಎಂದು ಮನವಿ ಮಾಡಿದ್ದಾರೆ.
ಏಷ್ಯಾ ಉಪಖಂಡದಲ್ಲಿ ಉಭಯ ರಾಷ್ಟ್ರಗಳು ಪರಸ್ಪರ ಒಂದಾಗಿ ಮುನ್ನಡೆಯುವ ಅವಶ್ಯಕತೆ ಇದೆ. ಬಡತನ ನಿವಾರಣೆ ಸೇರಿದಂತೆ ಪ್ರಾದೇಶಿಕ ಅಭಿವೃದ್ಧಿಗೆ ಮಾತುಕತೆಯೇ ಉತ್ತಮವಾದ ವೇದಿಕೆ. ಎರಡನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಪತ್ರದಲ್ಲಿ ಇಮ್ರಾನ್ ಖಾನ್ ಹೇಳಿದ್ದಾರೆ ಎಂದು ಜಿಯೋ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಾವು ಕಾಶ್ಮೀರ ಸಮಸ್ಯೆಯನ್ನು ಚರ್ಚಿಸಲು ಸಿದ್ಧರಿದ್ದೇವೆ. ಭಯೋತ್ಪಾದನೆ ನಿರ್ಮೂಲನೆಯಾಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಭಾರತ ಮತ್ತು ಪಾಕ್ ಭಯೋತ್ಪಾದನೆಯಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿವೆ. ನೀವು ಮಾತುಕತೆಗೆ ಸಿದ್ದರಿದ್ದರೆ ನಾವು ಅತೀವ ಉತ್ಸುಕರಾಗಿದ್ದೇವೆ ಎಂದು ಪಾಕ್ನ ವಿದೇಶಾಂಗ ವ್ಯವಹಾರಗಳ ಸಚಿವ ಷಾ ಮಹಮ್ಮದ್ ಖುರೇಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನದಿಂದ ಪತ್ರ ಬಂದಿರುವುದನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಖಚಿತ ಪಡಿಸಿದ್ದಾರೆ. ಆದರೆ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ನಡೆಯಲಿದೆಯೆ ಎಂಬುದನ್ನು ದೃಢಪಡಿಸಿಲ್ಲ.
ಕಳೆದ ಮೂರು ವರ್ಷದಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಹೇಳಿಕೊಳ್ಳುವಂತಿಲ್ಲ, ಈ ಹಿಂದೆ ಶಾಂಗೈನಲ್ಲಿ ಉಭಯ ರಾಷ್ಟ್ರದ ಮುಖಂಡರು ಪರಸ್ಪರ ಭೇಟಿಯಾಗಿದ್ದರೂ ಮಾತುಕತೆ ನಡೆದಿರಲಿಲ್ಲ.
ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಉರಿಯಲ್ಲಿ ನಡೆಸಿದ ದಾಳಿ ಕಳೆದ ಫೆಬ್ರವರಿಯಲ್ಲಿ ಜೈಷ್ ಇ ಮಹಮ್ಮದ್ ಸಂಘಟನೆಯ ಉಗ್ರರು ಜಮ್ಮು ಕಾಶ್ಮೀರದ ಸಿಆರ್ಪಿಎಫ್ ಯೋಧರ ವಾಹನ ಗುರಿಯಿಟ್ಟುಕೊಂಡು ನಡೆಸಿದ 40ಯೋಧರು ಮೃತಪಟ್ಟಿದ್ದರು.
ಈ ಘಟನೆ ನಡೆದು 14 ದಿನಗಳ ನಂತರ ಭಾರತ ಪ್ರತೀಕಾರವೆಂಬಂತೆ ಪಾಕ್ ಆಕ್ರಮಿತ ಬಾಲಾಕೋಟನಲ್ಲಿರುವ ಜೈಷ್ ಉಗ್ರರ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು.
ಇದಕ್ಕೆ ಪ್ರತಿದಾಳಿಯಾಗಿ ಪಾಕಿಸ್ತಾನ ಭಾರತದ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿಗೆ ಮುಂದಾಗಿತ್ತು. ಈ ವೇಳೆ ಭಾರತದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ್ದರು.
ನಂತರ ಪಾಕ್ ಸೈನಿಕರು ಅವರನ್ನು ಸೆರೆ ಹಿಡಿದಿದ್ದರು, ಭಾರತ ಕೂಡಲೇ ಅಭಿನಂದನ್ ಅವರನ್ನು ಬಿಡುಗಡೆ ಮಾಡುವಂತೆ ಜಾಗತಿಕ ಮಟ್ಟದಲ್ಲಿ ಒತ್ತಡ ಹಾಕಿತ್ತು.
ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ ಉಗ್ರರ ಒಳನುಸುಳುವಿಕೆ, ಸೈನಿಕರ ಮೇಲೆ ಹಲ್ಲೆ ಯಂತಹ ದಾಳಿಗಳೂ ಮರುಕಳಿಸುತ್ತಲೇ ಇವೆ. ಹೀಗಾಗಿ ನೆರೆಯ ರಾಷ್ಟ್ರದ ಜೊತೆ ಭಾರತ ಯಾವುದೇ ಮಾತುಕತೆ ನಡೆಸದೆ ಶಾಶ್ವತವಾಗಿ ಬಾಗಿಲು ಬಂದ್ ಮಾಡಿದೆ.