ಸಾಮಾನ್ಯ ಬೋಗಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೆಕು-ಇಲ್ಲದಿದ್ದರೆ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ-ಕೇಂದ್ರ ಸಚಿವ ಸುರೇಶ್ ಅಂಗಡಿ

ಬೆಂಗಳೂರು, ಜೂ.4- ಇನ್ನು ಮುಂದೆ ಸಾಮಾನ್ಯ ಬೋಗಿ (ಜನರಲ್)ಗಳಲ್ಲಿ ಶುಚಿತ್ವ ಇಲ್ಲದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಎಚ್ಚರಿಸಿದ್ದಾರೆ.

ಸಾಮಾನ್ಯ ಬೋಗಿಗಳಲ್ಲಿ ಕಡ್ಡಾಯವಾಗಿ ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಒಂದು ವೇಳೆ ಇದೇ ಪರಿಸ್ಥಿತಿ ಕಂಡುಬಂದಲ್ಲಿ ಅಂತಹ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಬೋಗಿಗಳಲ್ಲಿ ವಿದ್ಯಾರ್ಥಿಗಳು, ಬಡವರು, ಮಧ್ಯಮ ವರ್ಗದವರು ಪ್ರಯಾಣಿಸುತ್ತಾರೆ. ಕ್ಲಾಸ್ ಒನ್, ಕ್ಲಾಸ್ ಟುನಲ್ಲಿ ಸ್ಥಿತಿವಂತರು ಇರುತ್ತಾರೆ. ಹವಾ ನಿಯಂತ್ರಿತ ಬೋಗಿಗಳಲ್ಲಿ ಸ್ವಚ್ಛತೆ ಇರುವಾಗ ಸಾಮಾನ್ಯ ಬೋಗಿಗಳಲ್ಲಿ ಏಕೆ ಇರುವುದಿಲ್ಲ ಎಂದು ಪ್ರಶ್ನಿಸಿದರು.

ಖುದ್ದು ನಾನೇ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಅರಿಯಲು ಪ್ರಯತ್ನ ಮಾಡಿದ್ದೇನೆ. ರೈಲಿನಲ್ಲಿ ಪ್ರಯಾಣಿಕರಿಗೆ ಸ್ವಚ್ಛತೆ, ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

ಸಮರ್ಥನೆ: ಲಿಂಗಾಯತರಿಗೆ ಕೇಂದ್ರ ಸಂಪುಟದಲ್ಲಿ ಸಂಪುಟ ದರ್ಜೆ ಸ್ಥಾನ ನೀಡದೆ ಅವಮಾನ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಅಂಗಡಿ, ಬ್ರಾಹ್ಮಣ ಸಮುದಾಯದಿಂದ 65 ಮಂದಿ ಸಂಸದರಿದ್ದಾರೆ. ಲಿಂಗಾಯತ ಸಮುದಾಯದಿಂದ 9 ಮಂದಿ ಸಂಸದರಿರುವಾಗ ನಮಗೆ ಕೊಟ್ಟಿರುವುದು ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಂಡರು.

ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವಾಗ ರಾಷ್ಟ್ರೀಯ ಮಟ್ಟದಲ್ಲಿ ಯೋಚಿಸಿ ಕೊಟ್ಟಿರುತ್ತಾರೆ. ಅದನ್ನು ಬಿಟ್ಟು ಸಣ್ಣ ಮಟ್ಟದಲ್ಲಿ ಯೋಚಿಸುವುದು ಬೇಡ ಎಂದು ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಕೆಲಸ ಮಾಡುವುದೇ ಅದೃಷ್ಟ. ಬೆಳಗಾವಿಯ ಜನತೆ ನನ್ನನ್ನು ಈ ಬಾರಿ ಅತಿ ಹೆಚ್ಚು ಅಂತರದಿಂದ ಗೆಲ್ಲಿಸಿ ಲೋಕಸಭೆಗೆ ಆಯ್ಕೆ ಮಾಡಿದ್ದಾರೆ. ರಾಜ್ಯದ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸದೆ ಕೆಲಸ ಮಾಡುವುದಾಗಿ ಸುರೇಶ್ ಅಂಗಡಿ ಆಶ್ವಾಸನೆ ಕೊಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ