ಕೇರಳದಲ್ಲಿ ಮತ್ತೆ ನಿಫಾ: 23ವರ್ಷದ ಯುವಕನಲ್ಲಿ ಕಾಣಿಸಿಕೊಂಡ ವೈರಸ್​​; ಆತಂಕ ಬೇಡ ಎಂದ ಸರ್ಕಾರ

ತಿರುವನಂತಪುರಂ ಕಳೆದು ಹಲವು ಮಂದಿ ಪ್ರಾಣ ತೆಗೆದಿದ್ದ ನಿಫಾ ವೈರಸ್​ ಸೋಂಕು ಕೇರಳದಲ್ಲಿ ಕಾಣಿಸಿಕೊಂಡಿದೆ.  23 ವರ್ಷದ ಯುವಕನಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವಕನಲ್ಲಿ ನಿಫಾ ವೈರಸ್​ ಪತ್ತೆಯಾಗಿರುವುದನ್ನು ಕೇರಳ ಆರೋಗ್ಯ ಸಚಿವ ಕೆಕೆ ಶೈಲಾಜಾ ಸ್ಪಷ್ಟಪಡಿಸಿದ್ದಾರೆ.

ಇಬ್ಬರಿಗೆ ನಿಫಾ ವೈರಸ್​​ ಜ್ವರದ ಲಕ್ಷಣ  ಪತ್ತೆಯಾಗಿದೆ. ಇದರಲ್ಲಿ ಒಬ್ಬರನ್ನು ತೀವ್ರ ನಿಗಾಘಟಕದಲ್ಲಿ ಇಡಲಾಗಿದೆ. ಗಂಭೀರ ಪರಿಸ್ಥಿತಿ ಇಲ್ಲದಿದ್ದರೂ ಜ್ವರ ಹಾಗೂ ಗಂಟಲು ನೋವು ಉಲ್ಬಣಗೊಂಡ ಹಿನ್ನೆಲೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರೋಗ ಪತ್ತೆಯಾಗಿರುವ ಹುಡುಗನ ಸಂಪರ್ಕಹೊಂದಿರುವ 86 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಿಫಾ ವೈರಸ್​ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಇದರಿಂದ ಗಾಬರಿ ಪಡುವ ಅಗತ್ಯವಿಲ್ಲ. ಪರಿಸ್ಥಿತಿ ನಿಭಾಯಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನು ಈ ರೋಗಿಯನ್ನು ಉಪಚರಿಸುತ್ತಿದ್ದ ಇಬ್ಬರು ನರ್ಸ್​ಗಳಿಗೂ ಗಂಟಲು ಬೇನೆ ಕಾಣಿಸಿಕೊಂಡಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ನಿಫಾ ಸೋಂಕಿತರಿಗಾಗಿ ಕಲಮಸೆರಿ ಮೆಡಿಕಲ್​ ಕಾಲೇಜಿನಲ್ಲಿ ವಿಶೇಷ (ಐಸೋಲೇಷನ್​) ವಾರ್ಡ್​ ಮಾಡಲಾಗಿದ್ದು, ಇಂತಹ ರೋಗಿಗಳಿಗಾಗಿ ವಿಶೇಷ ಆಂಬ್ಯೂಲೆನ್ಸ್​  ವ್ಯವಸ್ಥೆ ಕೂಡ ಮಾಡಲಾಗಿದೆ,

ಕಳೆದ ವರ್ಷ 17 ಮಂದಿ ಬಲಿ ತೆಗೆದುಕೊಂಡಿದ್ದ ನಿಫಾ

ಕಳೆದ ವರ್ಷ ಕಾಜೀಕೋಡ್​ ಹಾಗೂ ಮಲಪ್ಪುರಂನಲ್ಲಿ ಕಾಣಿಸಿಕೊಂಡ ಈ ನಿಫಾ ವೈರಸ್​ಗೆ 17 ಮಂದಿ ಬಲಿಯಾಗಿದ್ದರು. ಕಲ್ಲಿಕೋಟೆಯಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ರಾಜ್ಯದಲ್ಲಿ ಆತಂಕ ಸೃಷ್ಟಿಸಿತು. ಕರ್ನಾಟಕದಲ್ಲಿ ಕೂಡ ಈ ರೋಗ ಹರಡದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

ಬಾವಲಿ ಹಾಗೂ ಹಂದಿಯಿಂದ ಹರಡುವ ಈ ವೈರಸ್​ನಿಂದಾಗಿ ತಲೆ ನೋವು, ಜ್ವರ, ಮೂರ್ಛೆ, ವಾಕರಿಕೆ, ಹೊಟ್ಟೆನೋವು, ವಾಂತಿಯಂತಹ ಲಕ್ಷಣಗಳು ಕಂಡು ಬರುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ