ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಎಚ್​. ವಿಶ್ವನಾಥ್

ಬೆಂಗಳೂರುಪಕ್ಷದಲ್ಲಿ ಸರಿಯಾದ ಗೌರವ ನೀಡದ ಕಾರಣ ಹಾಗೂ ಕಾಂಗ್ರೆಸ್​ ಕೆಲ ಮುಖಂಡ ನಡವಳಿಕೆಗಳಿಂದ ಬೇಸತ್ತು ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್​​.ವಿಶ್ವನಾಥ್ ಇಂದು ರಾಜೀನಾಮೆ ಘೋಷಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಶ್ವನಾಥ್, ತುಮಕೂರಿನಲ್ಲಿ ವ್ಯವಸ್ಥಿತವಾಗಿ ಖೆಡ್ಡಾ ತೋಡಿ ಸೋಲಿಸಲಾಯಿತು. ಜೋಡೆತ್ತಿನಂತೆ ಇರಬೇಕಾದ ಮೈತ್ರಿ ಪಕ್ಷಗಳು ಆ ರೀತಿ ಇರಲೇ ಇಲ್ಲ. ಮೈಸೂರಿನಿಂದ ಸ್ಪರ್ಧಿಸುವಂತೆ ಕೋರಿದರು ಅದು ಕಾಂಗ್ರೆಸ್​ ಷಡ್ಯಂತ್ರದಿಂದ ಸಾಧ್ಯವಾಗಲಿಲ್ಲ. ಕಾಂಗ್ರೆಸ್​ನ ನಾಯಕರ ಕೊಂಕು ಮಾತುಗಳಿಂದ ಅಹಿಂದ ಮತಗಳು ಚದುರಿಹೋಗಿ, ಜೆಡಿಎಸ್​ಗೆ ಸೋಲು ಉಂಟು ಮಾಡಿತು. ಸಮನ್ವಯ ಸಮಿತಿ ಕೇವಲ ನಾಮಾಕಾವಸ್ಥೆಯಂತೆ ಇತ್ತು. ಇದು ಸಿದ್ದರಾಮಯ್ಯ ಅವರ ಕೈಗೊಂಬೆಯಾಗಿತ್ತೆ ಹೊರತು ಎರಡು ಪಕ್ಷಗಳ ಸಮನ್ವಯ ಸಾಧಿಸುವ ಕೆಲಸವನ್ನು ಮಾಡಲಿಲ್ಲ, ಇಲ್ಲಿ ನನಗಾಗಲಿ ಮತ್ತು ದಿನೇಶ್ ಗುಂಡೂರಾವ್ ಅವರಿಗೆ ಸ್ಥಾನ ನೀಡಲಿಲ್ಲ. ಈ ಎಲ್ಲ ಕಾರಣಗಳಿಂದ ನಾನು ಬೇಸತ್ತು ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕಾರಣ ನೀಡಿದರು.

ಇಂದು ಪ್ರಾಂತೀಯ ಪಕ್ಷಗಳ ಅಗತ್ಯವಿದೆ. ಪ್ರಾಂತೀಯ ಪಕ್ಷಗಳು ಬಲಿಷ್ಠ ಆಗಿರುವುದರಿಂದಲೇ ಹಿಂದಿ ಹೇರಿಕೆ ಸಾಧ್ಯವಾಗಿಲ್ಲ. ಮೋದಿ ಅಲೆ ಇದೆ ಅಂತಾರೆ. ಒರಿಸ್ಸಾದಲ್ಲಿ ಏನಾಯ್ತು ಎಂದು ವಿಶ್ವನಾಥ್ ಪ್ರಾದೇಶಿಕ ಪಕ್ಷಗಳ ಮಹತ್ವ ತಿಳಿಸಿದರು.

ಸಮನ್ವಯ ಸಮಿತಿ ವಿಚಾರವಾಗಿ ಸಾಕಷ್ಟು ಅಸಮಾಧಾನ ಹೊಂದಿರುವ ವಿಶ್ವನಾಥ್, ಮೈತ್ರಿಯ ಪಾಲುದಾರ ಪಕ್ಷದ ರಾಜ್ಯಾಧ್ಯಕ್ಷನನ್ನೇ ಹೊರಗಿಟ್ಟರು. ಪಕ್ಷದ ವರಿಷ್ಠರು ಮನಸ್ಸು ಮಾಡಿದ್ದರೆ ನನ್ನನ್ನು ಸಮಿತಿಗೆ ಸೇರಿಸಬಹುದಾಗಿತ್ತು. ಆ ಕೆಲಸವನ್ನು ಅವರು ಮಾಡಲಿಲ್ಲ ಎಂದು ಪಕ್ಷದ ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದರು.

ಲೋಕಸಭೆ ಚುನಾವಣೆ ಫಲಿತಾಂಶ, ಮೈತ್ರಿ ನಾಯಕರ ಕೊಂಕು ನುಡಿಗಳು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಬೇಕಾದ ಕನಿಷ್ಠ ಗೌರವವನ್ನು ನೀಡದ ಕಾರಣಕ್ಕೆ ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಮುಂದೆ ಪಕ್ಷದಲ್ಲಿ ಇದ್ದುಕೊಂಡು ಹುಣಸೂರು ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿಗೆ ಶ್ರಮಿಸುತ್ತೇನೆ.

ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮುಂದೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡರೆ ಬೇಡ ಅನ್ನೋದಿಲ್ಲ. ಆದರೆ, ಮಂತ್ರಿ ಸ್ಥಾನ ಕೇಳಿಕೊಂಡು ನಾನಾಗಿ ಯಾರ ಬಳಿಯೂ ಹೋಗುವುದಿಲ್ಲ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ