ಬೆಂಗಳೂರು, ಜೂ.3-ಗುಣಪಡಿಸಬಹುದಾದಂತಹ ಅತಿಸಾರ ಬೇಧಿಯ ಬಗ್ಗೆ ಸರಿಯಾದ ಮಾಹಿತಿ ಹಾಗೂ ಜಾಗೃತಿ ಮೂಡಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ತಿಳಿಸಿದರು.
ನಗರದಲ್ಲಿಂದು ಆಯೋಜಿಸಿದ್ದ ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಉದ್ಘಾಟಿಸಿ ಮಾತನಾಡಿದ ಅವರು, ಅತಿಸಾರ ಬೇಧಿಯಿಂದಾಗಿ ಒಂದರಿಂದ 5 ವರ್ಷದೊಳಗಿನ ಶೇ.10ರಷ್ಟು ಮಕ್ಕಳು ಸಾವು ಸಂಭವಿಸುತ್ತಿದೆ. ಆದರೆ ಇದನ್ನು ಸುಲಭವಾಗಿ ತಡೆಗಟ್ಟಲು ಜಾಗೃತಿ ಮೂಡಿಸಬೇಕಿದೆ. ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಮಾಹಿತಿ ಕೊರತೆಯಿಂದಲೇ ಕೆಳಸ್ತರದ ಜನರಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂನ್ 17ರವರೆಗೆ ಪಾಕ್ಷಿಕ ಅಭಿಯಾನವನ್ನು ಆಯೋಜಿಸಿ ಆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಶಾ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಜೊತೆಗೂಡಿ ಅಭಿಯಾನ ಯಶಸ್ವಿಗೊಳಿಸಬೇಕು. ಯಾವುದೇ ಕಾರಣಕ್ಕೂ ಅಲಕ್ಷಿಸುವಂತಿಲ್ಲ. ಇಂತಹ ರೋಗಗಳಿಗೂ ಚಿಕಿತ್ಸೆ ಇದೆ.ಅದನ್ನು ಅರಿತು ಬೇರೆಯವರಿಗೂ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಪ್ರಮುಖವಾಗಿ ಶುದ್ಧ ಕುಡಿಯುವ ನೀರಿನ ಬಳಕೆ, ಶುಚಿತ್ವ ಕಾಪಾಡುವುದು, ಶೌಚಾಲಯ ಬಳಕೆ, ಪರಿಸರ ನೈರ್ಮಲ್ಯ, ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸುವುದು, ಪೌಷ್ಟಿಕ ಆಹಾರ ಒದಗಿಸುವುದು, ಎದೆ ಹಾಲು ಕುಡಿಯುವ ಮಕ್ಕಳಿಗೆ ಎದೆಹಾಲು ಉಣಿಸುವ ಮೂಲಕ ಇದನ್ನು ತಡೆಗಟ್ಟಲು ಸಾಧ್ಯವಿದೆ. ಈ ವರ್ಷ ತೀವ್ರತರ ಅತಿಸಾರ ಬೇಧಿ ಶೂನ್ಯ ಮಕ್ಕಳ ಮರಣ ಧ್ಯೇಯವಾಕ್ಯದೊಂದಿಗೆ ಅಭಿಯಾನ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಒಆರ್ಎಸ್, ಝಿಂಕ್ ಕೇಂದ್ರಗಳನ್ನು ಸ್ಥಾಪಿಸುವುದಲ್ಲದೆ, ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಇದರೊಂದಿಗೆ ಒಆರ್ಎಸ್ ದ್ರಾವಣ ತಯಾರಿಸುವ ಪ್ರಾತ್ಯಕ್ಷಿಕೆಯನ್ನು ತೋರಿಸಲು ಸೂಚಿಸಿದರು.
ತಾಲೂಕಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲ್ಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಝಿಂಕ್ ಔಷಧ ಕೇಂದ್ರ ತೆರೆದು ಚಿಕಿತ್ಸೆ ನೀಡಬೇಕು. ಗುಡ್ಡಗಾಡಿನಂತಹ ದುರ್ಗಮ ಪ್ರದೇಶಗಳಲ್ಲೂ ಜನರಿಗೆ ಅರಿವು ಮೂಡಿಸುವ ಕೆಲಸವಾಗಬೇಕು.ಇದಕ್ಕಾಗಿ ಸಂಚಾರಿ ದಳಗಳನ್ನು ರಚಿಸುವ ಮೂಲಕ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಿ.ಎಸ್.ರಮೇಶ್, ವಾರ್ತಾ ಮತ್ತು ಸಂಪರ್ಕ ಇಲಾಖೆ ನಿರ್ದೇಶಕ ಎನ್.ಭೃಂಗೇಶ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ.ಟಿ.ಎಸ್.ಪ್ರಭಾಕರ್, ಉಪನಿರ್ದೇಶಕ ಡಾ.ಪ್ರಭುದೇವ್ ಬಿ.ಗೌಡ, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಪ್ರಕಾಶ್, ಡಾ.ಸೈಯ್ಯದ್ ಸಿರಾಜುದ್ದೀನ್ ಮದನಿ ಉಪಸ್ಥಿತರಿದ್ದರು.