ರಾಜ್ಯದಲ್ಲಿ ಮುಂದುವರೆದ ಮುಂಗಾರು ಪೂರ್ವ ಮಳೆ

ಬೆಂಗಳೂರು, ಜೂ.3- ನೈಋತ್ಯ ಮುಂಗಾರು ಮಳೆ ಈ ಬಾರಿ ವಿಳಂಬವಾಗಲಿದ್ದು, ಮುಂಗಾರು ಪೂರ್ವ ಮಳೆ ರಾಜ್ಯದಲ್ಲಿ ಮುಂದುವರಿದಿದೆ. ನಿನ್ನೆ ರಾಜ್ಯಾದ್ಯಂತ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಜತೆಗೆ ಉತ್ತರದಿಂದ ದಕ್ಷಿಣಾಭಿಮುಖವಾಗಿ ಟ್ರಪ್ ನಿರ್ಮಾಣವಾಗಿರುವುದರಿಂದ ರಾಜ್ಯದ ಒಳನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಗದಗ, ಕೋಲಾರ, ಬಳ್ಳಾರಿ, ಚಿಕ್ಕಬಳ್ಳಾಪುರ, ಕೊಪ್ಪಳ, ದಕ್ಷಿಣ ಕನ್ನಡ, ರಾಮನಗರ, ಹಾಸನ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಉತ್ತಮ ಮಳೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗಿದ್ದರೆ, ಕೆಲವೆಡೆ ಸಾಧಾರಣ ಮಳೆಯಾದ ವರದಿಯಾಗಿದ್ದು, ಒಟ್ಟಾರೆ ರಾಜ್ಯಾದ್ಯಂತ ಮಳೆಯಾದ ವರದಿಯಾಗಿದೆ ಎಂದರು.

ಹವಾ ಮುನ್ಸೂಚನೆ ಪ್ರಕಾರ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಸೇರಿದಂತೆ ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ. ಮೇ ಅಂತ್ಯಕ್ಕೆ ಮುಂಗಾರು ಪೂರ್ವ ಮಳೆ ಮುಕ್ತಾಯವಾದರೂ ಇನ್ನೂ ಮುಂಗಾರು ಆರಂಭವಾಗದೆ ಇರುವುದರಿಂದ ಈ ಮಳೆಯನ್ನೂ ಕೂಡ ಮುಂಗಾರು ಪೂರ್ವ ಮಳೆ ಎಂದೇ ಪರಿಗಣಿಸಲಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂ.6ರಂದು ಕೇರಳ ಕರಾವಳಿಯನ್ನು ಮುಂಗಾರು ಪ್ರವೇಶಿಸಬೇಕು. ಆದರೆ, ಮುಂಗಾರು ಪೂರ್ವ ಮಳೆ ಚುರುಕಾಗಿರುವುದರಿಂದ ಮುಂಗಾರು ಮಳೆ ಆಗಮನದಲ್ಲಿ ವಿಳಂಬವಾಗುವ ಸಾಧ್ಯತೆಗಳಿವೆ. ನಿರೀಕ್ಷಿತ ಅವಧಿಗಿಂತ ಒಂದೆರಡು ದಿನ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆಯಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ