ಬೆಂಗಳೂರು,ಜೂ.1- ಸಂಗೊಳ್ಳಿ ರಾಯಣ್ಣ ರೈಲ್ವೆ (ಸಿಟಿ ರೈಲ್ವೆ) ನಿಲ್ದಾಣದಲ್ಲಿ ದೊರೆತಿರುವ ಗ್ರೆನೇಡ್ ಮಾದರಿಯ ವಸ್ತು ನಿಲ್ದಾಣಕ್ಕೆ ಹೇಗೆ ಬಂದಿತು ಎಂಬ ಬಗ್ಗೆ ತನಿಖಾ ತಂಡಗಳು ಮಾಹಿತಿ ಕಲೆ ಹಾಕುತ್ತಿವೆ.
ರೈಲ್ವೆ ನಿಲ್ದಾಣದ ಒಳಗೆ ಹಾಗೂ ಹೊರಗೆ ಅಳವಡಿಸಲಾಗಿರುವ ಸಿಸಿಟಿವಿಗಳನ್ನು ತನಿಖಾ ತಂಡಗಳು ಪರಿಶೀಲನೆ ನಡೆಸುತ್ತಿದ್ದು, ಕೆಲವೊಂದು ಸಿಸಿಟಿವಿಗಳ ಫುಟೇಜ್ಗಳನ್ನು ಪಡೆದುಕೊಂಡು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿವೆ.
ಡಮ್ಮಿ ಅಥವಾ ಕಂಟ್ರಿಮೇಡ್ ಗ್ರೆನೇಡ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿ 24 ಗಂಟೆ ಕಳೆದರೂ ಈ ತನಕ ಗ್ರೆನೇಡ್ ನಿಲ್ದಾಣದೊಳಗೆ ಹೇಗೆ ಬಂದಿತು ಎಂಬುವುದು ಇನ್ನು ತಿಳಿದುಬಂದಿಲ್ಲ.
ಈ ವಸ್ತುವನ್ನು ಯಾರು ಯಾವ ಕಾರಣಕ್ಕಾಗಿ ನಿಲ್ದಾಣದೊಳಗೆ ತಂದಿದ್ದರೆಂಬುದು ಗೊತ್ತಾಗಿಲ್ಲ. ರೈಲಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಸಂದರ್ಭದಲ್ಲಿ ಬಿದ್ದಿರಬಹುದೇ?ಅಥವಾ ಯಾರಾದರೂ ರೈಲು ನಿಲ್ದಾಣದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಂದಿಟ್ಟಿದ್ದರೇ?ಇಲ್ಲವೆ ಪೊಲೀಸ್ ಭದ್ರತೆಯನ್ನು ಪರಿಶೀಲಿಸುವುದಕ್ಕಾಗಿ ಇಟ್ಟಿದ್ದರೇ? ಎಂಬಿತ್ಯಾದಿ ಬಗ್ಗೆ ತನಿಖಾ ತಂಡಗಳು ತನಿಖೆ ನಡೆಸುತ್ತಿವೆ.
ನಿನ್ನೆ ಬೆಳಗ್ಗೆ ನಿಲ್ದಾಣದಲ್ಲಿ ಪತ್ತೆಯಾದ ಗ್ರೆನೇಡ್ನ್ನು ನಿಷ್ಕ್ರಿಯಗೊಳಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ತನಿಖಾ ತಂಡಗಳು ಕಾಯುತಿವೆ.
ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾದ ಹಿನ್ನೆಲೆಯಲ್ಲಿ ನಗರದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.