ಎರಡನೇ ಬಾರಿಗೆ ಶಪಥಗ್ರಹಣ ಮಾಡಿದ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ

ನವದೆಹಲಿ, ಮೇ 31-ಪ್ರಧಾನಿ ನರೇಂಧ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ನಿನ್ನೆ ಎರಡನೇ ಬಾರಿಗೆ ಶಪಥಗ್ರಹಣ ಮಾಡಿದ ವೈಭವೋಪೇತ ಕಾರ್ಯಕ್ರಮವನ್ನು ದೇಶ-ವಿದೇಶಗಳ ಗಣ್ಯಾತಿಗಣ್ಯರು ಮತ್ತು ವಿವಿಧ ಕ್ಷೇತ್ರಗಳ ಖ್ಯಾತನಾಮರು ಸಾಕ್ಷಿಕರಿಸಿದರು. ಹೊಸ ಮಂತ್ರಿಮಂಡಲದಲ್ಲಿ ನಿನ್ನೆ ಪ್ರತಿಜ್ಞಾವಿಧಿ ಸ್ವೀಕರಿಸಿದ 58 ಸಚಿವರಲ್ಲಿ ಇಬ್ಬರು ಮಂತ್ರಿಮಹೋದಯರು ಎಲ್ಲರಿಗಿಂತ ತೀರಾ ವಿಭಿನ್ನತೆಯಿಂದ ಗಮನಸೆಳೆದಿದ್ದಾರೆ.

ಬಿಜೆಪಿ ಮುಖಂಡರಾದ ಮನ್‍ಸುಖ್ ಲಾಲ್ ಮಾಂಡವಿಯಾ ಮತ್ತು ಅರ್ಜುನ್ ರಾಮ್ ಮೇಘ್ವಾಲ್ ತಮ್ಮ ಮನೆಗಳಿಂದ ಸೈಕಲ್‍ಗಳಲ್ಲಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ನಲವತ್ತಾರು ವರ್ಷದ ಮಾಂಡವೀಯಾ ಸೈಕಲ್ ಸವಾರಿ ದೆಹಲಿ ಜನತೆಗೆ ಹೊಸದೇನಲ್ಲ. ಈ ಹಿಂದೆ ಸಂಸದರಾಗಿದ್ದ ಇವರು ಕಳೆದ ಐದು ವರ್ಷಗಳಿಂದಲೂ ಸೈಕಲ್ ತುಳಿಯುತ್ತಾ ಪಾರ್ಲಿಮೆಂಟ್‍ಗೆ ಹೋಗಿ ಬರುವುದನ್ನು ಜನರು ನೋಡಿದ್ದಾರೆ.

ಬಡವರ ವಾಹನ ಸೈಕಲ್ ಎಂದರೆ ಇವರಿಗೆ ಅಚ್ಚುಮೆಚ್ಚು. ಗುಜರಾತ್‍ನ ಸೌರಾಷ್ಟ್ರ ಜಿಲ್ಲೆಯ ಹನೋಲ್ ಎಂಬ ಪುಟ್ಟ ಗ್ರಾಮದ ರೈತನ ಮಗ ಇವರು.

2002ರಲ್ಲಿ 28 ವರ್ಷದಲ್ಲೇ ಗುಜರಾತ್‍ನ ಅತ್ಯಂತ ಕಿರಿಯ ಶಾಸಕ ಎಂಬ ಹೆಗ್ಗಳಿಕೆ ಪಡೆದಿದ್ದರು. ನಂತರ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆದಾದ ಮಾಂಡವಿಯಾ ಮೋದಿ ಮಂತ್ರಿಮಂಡಲದಲ್ಲಿ ಸಾರಿಗೆ ಖಾತೆ ರಾಜ್ಯ ಸಚಿವರಾಗಿದ್ದರು. ಎರಡನೇ ಬಾರಿ ಈಗ ಸಚಿವರಾಗಿದ್ದಾರೆ.

ಮೋದಿ ಸಂಪುಟದಲ್ಲಿ ದ್ವಿತೀಯ ಬಾರಿಗೆ ಸ್ಥಾನ ಪಡೆದಿರುವ ಅರ್ಜುನ್ ರಾಮ್ ಮೇಘ್ವಾಲ್ ಖಡಕ್ ಐಎಎಸ್ ಅಧಿಕಾರಿಯಾಗಿದ್ದರು. ಇವರಿಗೂ ಅಷ್ಟೇ ಬೈಸಿಕಲ್ ಅತ್ಯಂತ ಪ್ರಿಯ. ರಾಜಸ್ತಾನದ ಶ್ರೀಮಂತ ಕುಟುಂಬದವರಾದ ಇವರು ಕಚೇರಿಗಳಿಗೆ ಸೈಕಲ್‍ನಲ್ಲೇ ಹೋಗುತ್ತಿದ್ದರು. ಬಿಕೆನರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ತಮ್ಮ ಸೋದರ ಸಂಬಂಧಿ ಮದನ್‍ಗೋಪಾಲ್ ಮೇಘ್ವಾಲ್‍ರನ್ನು ಮಣಿಸಿ ಚುನಾಯಿತಗಾಗಿ ಈಗ ಎರಡನೇ ಬಾರಿ ಮಂತ್ರಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ