ಪ್ರಧಾನಿ ಮೋದಿ ಸಂಪುಟ ಸೇರಿದ ಎಸ್.ಜೈಶಂಕರ್

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ಎಸ್​. ಜೈಶಂಕರ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜೈಶಂಕರ್​ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಜೈಶಂಕರ್​ ಅವರು ಜನವರಿ 2015 ರಿಂದ ಜನವರಿ 2018ರ ವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರೊಂದಿಗೆ ದೇಶದ ವಿದೇಶಾಂಗ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಡಾಕ್​ನ ದೆಪ್​ಸಾಂಗ್​ ಮತ್ತು ಡೋಕ್ಲಾಮ್​ನಲ್ಲಿ ಚೀನಾದೊಂದಿಗೆ ಉಂಟಾಗಿದ್ದ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

ಸೇವೆಯಿಂದ ನಿವೃತ್ತರಾದ ನಂತರ ಜೈಶಂಕರ್​ ಅವರು ಟಾಟಾ ಗ್ರೂಪ್​ನ ಗ್ಲೋಬಲ್​ ಕಾರ್ಪೊರೇಟ್​ ಅಫೇರ್ಸ್​ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

1977ರಲ್ಲಿ ಭಾರತೀಯ ವಿದೇಶಾಂಗ ಸೇವೆಗೆ ಸೇರ್ಪಡೆಯಾಗಿದ್ದ ಜೈಶಂಕರ್​ ಅವರು ಸಿಂಗಾಪುರ, ಚೀನಾ ಮತ್ತು ಅಮೆರಿಕದಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ