ಬೆಂಗಳೂರು, ಮೇ 29-ಸಂಪುಟದಲ್ಲಿರುವ ಸಚಿವರುಗಳ ಪೈಕಿ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದ ಉಳಿವಿಗೆ ಸಹಕಾರ ನೀಡಬೇಕು ಎಂದು ಇಂದು ಸಂಜೆ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಾಯಕರು ಮನವಿ ಮಾಡಲು ನಿರ್ಧರಿಸಿದ್ದಾರೆ.
ಅಪಾಯದಂಚಿನಲ್ಲಿರುವ ಸರ್ಕಾರವನ್ನು ರಕ್ಷಿಸಿಕೊಳ್ಳಲು ಅತೃಪ್ತರಿಗೆ ಸಚಿವ ಸ್ಥಾನ ನೀಡಲು ಸಂಪುಟ ಪುನಾರಚನೆ ಅನಿವಾರ್ಯವಾಗಿದೆ. ಹೀಗಾಗಿ ಸಚಿವರುಗಳೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಬೇಕು, ಇಲ್ಲದೆ ಹೋದರೆ ಹೈಕಮಾಂಡ್ ತನ್ನದೇ ಆದ ನಿರ್ಧಾರ ಕೈಗೊಳ್ಳುತ್ತದೆ. ಆ ಸಂದರ್ಭದಲ್ಲಿ ಯಾರೂ ಬೇಸರಪಟ್ಟುಕೊಳ್ಳಬಾರದು. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗಿಂತ ಪಕ್ಷ ಮುಖ್ಯ. ಹಾಗಾಗಿ ಸಚಿವರು ಸ್ವಪ್ರೇರಿತರಾಗಿ ತ್ಯಾಗ ಮಾಡಲು ಮುಂದಾಗಬೇಕು ಎಂದು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮನವಿ ಮಾಡಲಿದ್ದಾರೆ ಎಂದುಹೇಳಲಾಗಿದೆ.
ಒಂದು ವೇಳೆ ಸಿದ್ದರಾಮಯ್ಯ ಅವರ ಮನವಿಗೆ ಓಗೊಟ್ಟು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇತರರಿಗೆ ಅವಕಾಶ ಮಾಡಿಕೊಟ್ಟರೆ ಸಮ್ಮಿಶ್ರ ಸರ್ಕಾರಕ್ಕೆ ಬಂದೊದಗಿರುವ ಕಂಟಕ ನಿವಾರಣೆಯಾಗಲಿದೆ ಎಂದು ಹೇಳಲಾಗಿದೆ.
ಸಚಿವರು ರಾಜೀನಾಮೆ ನೀಡಲು ನಿರಾಕರಿಸಿದರೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಕೆಲವರ ಹೆಸರುಗಳನ್ನು ಪಟ್ಟಿ ಮಾಡಿಕೊಂಡಿದ್ದು ಅದರಂತೆ ಸಂಪುಟದಿಂದ ಸುಮಾರು ಏಳೆಂಟು ಮಂದಿಯನ್ನು ಕೈಬಿಟ್ಟು ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಮೂಲಗಳು ತಿಳಿಸಿವೆ.