ಬೆಂಗಳೂರು, ಮೇ 28-ಕಾಂಗ್ರೆಸ್ನಲ್ಲಿ ಅತೃಪ್ತ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಮಾಧಾನ ಪಡಿಸಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆಲವರು ಷರತ್ತುಗಳ ಮೇಲೆ ಷರತ್ತುಗಳನ್ನು ವಿಧಿಸಲಾರಂಭಿಸಿದ್ದಾರೆ.
ಸಂಪುಟ ಪುನಾರಚನೆಯ ಚರ್ಚೆಗಳು ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ನ ಅಜಯ್ಸಿಂಗ್, ಶಿವರಾಮ್ ಹೆಬ್ಬಾರ್, ರಮೇಶ್ ಜಾರಕಿ ಹೊಳಿ, ಎಸ್.ಟಿ.ಸೋಮಶೇಖರ್ ಮತ್ತಿತರರು ತಮಗೂ ಸಂಪುಟದಲ್ಲಿ ಅವಕಾಶ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.
ಬಂಡಾಯದ ನೇತೃತ್ವ ವಹಿಸಿರುವ ರಮೇಶ್ ಜಾರಕಿ ಹೊಳಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಂಧಾನದಿಂದ ಸ್ವಲ್ಪ ಮೆತ್ತಗಾಗಿದ್ದು, ತಮಗೆ ಸಚಿವ ಸ್ಥಾನ ಕೊಟ್ಟರೆ ಪಕ್ಷ ಬಿಡುವುದಿಲ್ಲ ಎಂಬ ಷರತ್ತು ವಿಧಿಸಿದ್ದಾರೆ. ಜೊತೆಗೆ ಲಕ್ಷ್ಮಿಹೆಬ್ಬಾಳ್ಕರ್ ಅವರನ್ನು ಸಚಿವರನ್ನಾಗಿ ಮಾಡಬಾರದು, ತಮಗೆ ಜಲಸಂಪನ್ಮೂಲ ಖಾತೆಯನ್ನೇ ನೀಡಬೇಕು ಎಂಬ ಬೇಡಿಕೆ ಇಟ್ಟಿರುವುದಾಗಿ ತಿಳಿದುಬಂದಿದೆ.
ರಮೇಶ್ ಜಾರಕಿ ಹೊಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಇಂಧನ ಖಾತೆಯನ್ನು ನೀಡುವುದಾಗಿ ಸಂಧಾನ ಮಾತುಕತೆಯಲ್ಲಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಇಂಧನ ಖಾತೆಗೆ ನಿರಾಕರಿಸಿರುವ ರಮೇಶ್ಜಾರಕಿ ಹೊಳಿ, ತಮಗೆ ಜಲಸಂಪನ್ಮೂಲ ಅಥವಾ ಗೃಹ ಖಾತೆಯನ್ನೇ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಇನ್ನು ಜೇವರ್ಗಿ ಶಾಸಕ ಅಜಯ್ಸಿಂಗ್ ತಾವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಪಕ್ಷಕ್ಕೆ ಮೊದಲಿನಿಂದಲೂ ನಿಷ್ಠರಾಗಿ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ನಲ್ಲಿ ಪಕ್ಷ ವಿರೋಧಿಗಳಿಗೆ ಹೆಚ್ಚಿನ ಅವಕಾಶ ಸಿಗುತ್ತಿವೆ. ತಮಗೆ ಸಚಿವ ಸ್ಥಾನ ನೀಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹೆಚ್ಚಿನ ಲಾಭವಾಗಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ನ ಶಿವರಾಮ್ ಹೆಬ್ಬಾರ್ ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ತಾವು ಬಿಜೆಪಿಗೆ ಹೋಗುವುದಿಲ್ಲ. ಆದರೆ ಸಂಪುಟದಲ್ಲಿ ಅವಕಾಶ ನೀಡದಿದ್ದರೆ ರಾಜಕೀಯವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಬೆದರಿಕೆವೊಡ್ಡಿದ್ದಾರೆ ಎನ್ನಲಾಗಿದೆ.
ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವರು ಸಚಿವ ಸ್ಥಾನ ಘೋಷಣೇ ಮಾಡದಿದ್ದರೆ ಸರ್ಕಾರ ಉಳಿಯುವುದೇ ಕಷ್ಟ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ.
ಬಿಡಿಎ ಅಧ್ಯಕ್ಷರಾಗಿರುವ ಎಸ್.ಟಿ.ಸೋಮಶೇಖರ್ ಅವರು, ತಮಗೂ ಸಚಿವ ಸ್ಥಾನ ನೀಡಿ ಎಂದು ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಕುಮಾರಸ್ವಾಮಿಯವರು ಎಸ್.ಟಿ.ಸೋಮಶೇಖರ್ ಜೊತೆ ಮಾತುಕತೆಗೆ ಮುಂದಾಗಿದ್ದು, ಈಗಾಗಲೇ ನೀಡಿರುವ ಬಿಡಿಎ ಅಧ್ಯಕ್ಷ ಸ್ಥಾನದಲ್ಲಿ ಸಂಪೂರ್ಣ ಅಧಿಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಎಸ್.ಟಿ.ಸೋಮಶೇಖರ್ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ನೇಮಿಸಿದ ಬೆನ್ನಲ್ಲೇ ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಹ್ಮಣ್ಯಂ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಅಧ್ಯಕ್ಷರ ಅಧಿಕಾರ ವ್ಯಾಪ್ತಿಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆದಿತ್ತು. ಆ ಎಲ್ಲ ಲೋಪದೋಷ ಸರಿಪಡಿಸಿ ಸಂಪೂರ್ಣ ಅಧಿಕಾರ ನೀಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಆದರೆ ಎಸ್.ಟಿ.ಸೋಮಶೇಖರ್ ಅವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರದ ಶಾಸಕ ಕೆ.ಸುಧಾಕರ್, ಮಸ್ಕಿಯ ಪ್ರತಾಪ್ಗೌಡ ಪಾಟೀಲ್, ಭೀಮಾನಾಯಕ್ ಮತ್ತಿತರರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವುದಾಗಿ ತಿಳಿದುಬಂದಿದೆ.
ಕಾಂಗ್ರೆಸ್ ನಾಯಕರು ತಟಸ್ಥವಾಗಿರುವ ಸಂದರ್ಭದಲ್ಲಿ ಕಾರ್ಯಾಚರಣೆಗಿಳಿದಿದ್ದು, ಸರ್ಕಾರ ಉಳಿಸಿಕೊಳ್ಳಲು ಅತೃಪ್ತ ಮನವೊಲಿಕೆಗೆ ಮುಂದಾಗಿದ್ದಾರೆ.
ಇಂದು ಸಂಜೆ ಕಾಂಗ್ರೆಸ್ ಹೈಕಮಾಂಡ್ ಕೂಡ ಕಾವೇರಿಯಲ್ಲಿ ಸಚಿವರ ಸಭೆ ನಡೆಸಲಿದ್ದು, ಅತೃಪ್ತ ಶಾಸಕರ ಜೊತೆಯೂ ಮಾತುಕತೆ ನಡೆಸಲಿದೆ ಎಂದು ತಿಳಿದುಬಂದಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಜೂನ್ ತಿಂಗಳ ಎರಡನೇ ವಾರದಲ್ಲಿ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ.