ನವದೆಹಲಿ: ಆಂಧ್ರಪ್ರದೇಶದಲ್ಲಿ ಭರ್ಜರಿ ಗೆಲುವು ಸದಹಿಸಿರುವ ವೈಎಸ್ ಆರ್ ಕಾಂಗ್ರೆಸ್ ವರಿಷ್ಠ ಹಾಗೂ ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ವೈ.ಎಸ್ ಜಗನ್ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ದೆಹಲಿಯಲ್ಲಿ ಪ್ರಧಾನಿ ಭೇಟಿಯಾದ ಜಗನ್ ಮೋಹನ್ ರೆಡ್ದಿ, ಮೇ 30ರಂದು ವಿಜಯವಾಡದಲ್ಲಿ ನಡೆಯುವ ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಗಳಿಸಿದ ಪ್ರಚಂಡ ಗೆಲುವಿಗಾಗಿ ಪ್ರಧಾನಿ ಮೋದಿ ಅವರನ್ನು ಜಗನ್ ಅಭಿನಂದಿಸಿದರು. ಆಂಧ್ರದಲ್ಲಿ ಭರ್ಜರಿ ಜಯಗಳಿಸಿದ ಜಗನ್ ಅವರಿಗೆ ಪ್ರಧಾನಿ ಮೋದಿ ಅವರೂ ಅಭಿನಂದನೆ ಸಲ್ಲಿಸಿದರು.
ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪಕ್ಷದ ಸಂಸದರ ನಿಯೋಗದ ಜತೆಗೆ ಪ್ರಧಾನಿ ಅವರನ್ನು ಭೇಟಿ ಮಾಡಿದ ಜಗನ್, ಆಂಧ್ರದ ನಾನಾ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರದ ನೆರವು ಹಾಗೂ ಬೆಂಬಲ ಯಾಚಿಸಿದರು.
ಆಂಧ್ರಕ್ಕೆ ವಿಶೇಷ ಸ್ಥಾನಮಾನ ಯಾಕೆ ಅಗತ್ಯವಿದೆ ಎಂಬುದನ್ನು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಲು ಜಗನ್ ಯತ್ನಿಸಿದರು. ಕೇಂದ್ರದ ಸಕ್ರಿಯ ಸಹಾಯವಿಲ್ಲದೆ ಆಂಧ್ರ ಪ್ರದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಜಗನ್ ಬೇಡಿಕೆಗಳಿಗೆ ಪ್ರಧಾನಿ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಮೂಲಗಳು ತಿಳಿಸಿವೆ.
Jaganmohan Reddy meets PM Modi