ಬೆಂಗಳೂರು,ಮೇ 25- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಮುನ್ನೆಡೆಸುವ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಮಹತ್ವದ ಮಾತುಕತೆ ನಡೆಸಿದರು.
ಪದ್ಮನಾಭನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿಯಾಗಿದ್ದ ಮುಖ್ಯಮಂತ್ರಿ ಲೋಕಸಭಾ ಚುನಾವಣಾ ಫಲಿತಾಂಶ, ಮೈತ್ರಿ ಸರ್ಕಾರಕ್ಕೆ ಎದುರಾಗಲಿರುವ ಗಂಡಾಂತರಗಳು, ಪ್ರಚಲಿತ ರಾಜಕೀಯ ವಿದ್ಯಾಮಾನ, ಪಕ್ಷ ಸಂಘಟನೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸುತ್ತಿರುವ ಯತ್ನಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದು, ಆಪರೇಷನ್ ಕಮಲವನ್ನು ತಡೆಯುವ ಕಾರ್ಯತಂತ್ರದ ಬಗ್ಗೆಯೂ ಗಂಭೀರ ಸಮಾಲೋಚನೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸರ್ಕಾರವನ್ನು ಉಳಿಸಿಕೊಂಡು ಮುನ್ನಡೆಸುವ ಬಗ್ಗೆ ಈಗಾಗಲೇ ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಗೌಡರ ಮಾರ್ಗದರ್ಶನವನ್ನು ಪಡೆದಿದ್ದಾರೆ.
ಆಡಳಿತ ಯಂತ್ರಕ್ಕೆಚುರುಕು ಮುಟ್ಟಿಸಿ ಆಡಳಿತ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯ ಆಮಿಷಕ್ಕೆಒಳಗಾಗದಂತೆ ನೋಡಿಕೊಳ್ಳುವುದು ಆಗಲೂ ಆಪರೇಷನ್ ಕಮಲ ತಡೆಯಲು ಸಾಧ್ಯವಾಗದಿದ್ದರೆ ಪ್ರತಿತಂತ್ರ ರೂಪಿಸುವ ವಿಚಾರದ ಬಗ್ಗೆ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಗೌಡರನ್ನು ಭೇಟಿಯಾಗಿ ಕುಮಾರಸ್ವಾಮಿ ಸಲಹೆ ಮಾರ್ಗದರ್ಶನಗಳನ್ನು ಪಡೆಯುತ್ತಿದ್ದಾರೆ.
ನಿನ್ನೆ ನಡೆದ ಅನೌಪಚಾರಿಕ ಸಚಿವ ಸಂಪುಟ ಸಭೆಗೂ ಮುನ್ನ ಗೌಡರನ್ನು ಮುಖ್ಯಮಂತ್ರಿ ಭೇಟಿಯಾಗಿದ್ದರು. ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾದ ವಿಚಾರ, ನಿನ್ನೆ ರಾತ್ರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ನಡೆಸಿದ ಮಾತುಕತೆ ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ನಡೆಸಿದ ಚರ್ಚೆಯ ಸೇರಿದಂತೆ ಎಲ್ಲ ವಿಚಾರಗಳನ್ನು ಗೌಡರೊಂದಿಗೆ ಕುಮಾರಸ್ವಾಮಿ ಹಂಚಿಕೊಂಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಸಮಾಧಾನ ಅತೃಪ್ತಿಯನ್ನುಹೋಗಲಾಡಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಭೇಟಿಯ ಸಂದರ್ಭದಲ್ಲಿಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೂಡ ಜೊತೆಯಲ್ಲಿದ್ದರು.