ಮೈತ್ರಿ ಸರ್ಕಾರ ಸ್ವಯಂಕೃತ ಅಪರಾಧದಿಂದಲೇ ಪತನವಾಗುತ್ತದೆ

ಬೆಂಗಳೂರು,ಮೇ 24-ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆಯಾಗುವವರೆಗೂ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ಯಾವುದೇ ಚಟುವಟಿಕೆಗಳನ್ನು ನಡೆಸಬಾರದು ಎಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ತಮ್ಮ ಸ್ವಯಂಕೃತ ಅಪರಾಧದಿಂದಲೇ ಪತನವಾಗುತ್ತದೆ. ಈಗಾಗಲೇ ಫಲಿತಾಂಶ ಬಂದ ನಂತರ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.ಬಿಜೆಪಿಯಿಂದ ಸರ್ಕಾರ ಪತನವಾಯಿತು ಎಂಬ ಕಳಂಕ ಬಾರದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಸಲಹೆ ನೀಡಿದ್ದಾರೆ.

ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದರಲ್ಲಿ ಯಾವ ಸಂಶಯವೂ ಬೇಡ.ಆದರೆ ನಮ್ಮಿಂದಲೇ ಸರ್ಕಾರ ಪತನವಾಯಿತು ಎಂದರೆ ಕೆಲವು ಸಮುದಾಯಗಳು ಪಕ್ಷದ ವಿರುದ್ಧ ತಿರುಗಿಬೀಳುತ್ತಾರೆ. ಹಾದಿಬೀದಿಯಲ್ಲಿ ಅವರೇ ಕಿತ್ತಾಡಿಕೊಳ್ಳುತ್ತಿರುವಾಗ ಅದರ ಕಳಂಕ ನಮಗೇಕೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಪ್ರಶ್ನೆ ಮಾಡಿದ್ದಾರೆ.

ಮೊದಲು ಕೇಂದ್ರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆಗಳು ಮುಗಿಯಬೇಕು. ನಂತರ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಗೊಂದಲ ಮುಗಿದ ಬಳಿಕ ಕರ್ನಾಟಕ ಅಥವಾ ಮಧ್ಯಪ್ರದೇಶದಲ್ಲಿರುವ ಸರ್ಕಾರ ಅಸ್ಥಿರಗೊಳಿಸಲು ಕಾರ್ಯತಂತ್ರವನ್ನು ರೂಪಿಸಿದ್ದೇವೆ. ನೀವು ಹಾದಿಬೀದಿಯಲ್ಲಿ ನಿಂತು ರಂಪ ಮಾಡುವ ಬದಲು ಮೌನದಿಂದಲೆ ಎಲ್ಲಾ ಚಟುವಟಿಕೆಗಳನ್ನು ಗಮನಿಸಬೇಕೆಂದು ಸಲಹೆ ಮಾಡಿದ್ದಾರೆ.

ಫಲಿತಾಂಶ ಪ್ರಕಟವಾಗುವ ವೇಳೆ ಯಡಿಯೂರಪ್ಪನವರೊಂದಿಗೆ ಮಾತನಾಡಿದ ಷಾ, ಬಿಜೆಪಿ ಪರ ಫಲಿತಾಂಶ ಬಂದರೆ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಆದರೆ ಆಪರೇಷನ್ ಕಮಲದ ಮೂಲಕ ಶಾಸಕರ ರಾಜೀನಾಮೆ ನೀಡಿಸಿ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡಬೇಡಿ ಎಂದು ಸೂಚಿಸಿದ್ದರು.

ವರಿಷ್ಠರ ಆದೇಶವನ್ನು ಪಾಲನೆ ಮಾಡುತ್ತಿರುವ ರಾಜ್ಯ ಘಟಕದ ನಾಯಕರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಮೂಲಕ ಆಪರೇಷನ್ ಕಮಲ:
ಕಾಂಗ್ರೆಸ್‍ನ ಭಿನ್ನಮತೀಯ ಶಾಸಕ ರಮೇಶ್ ಜಾರಕಿಹೊಳಿ ಮೂಲಕ ಕೆಲವು ಅತೃಪ್ತ ಶಾಸಕರನ್ನು ಸೆಳೆಯಲು ಬಿಜೆಪಿ ತೆರೆಮರೆಯಲ್ಲಿ ತನ್ನ ಕಸರತ್ತು ನಡೆಸುತ್ತಿದೆ.

ರಮೇಶ್ ಜಾರಕಿಹೊಳಿ ಜೊತೆ ಮಹೇಶ್ ಕುಮಟಳ್ಳಿ,ಬಿ.ನಾಗೇಂದ್ರ, ಡಾ.ಸುಧಾಕರ್, ಪ್ರತಾಪ್‍ಗೌಡ ಪಾಟೀಲ್, ಜೆ.ಎನ್.ಗಣೇಶ್ ಸೇರಿದಂತೆ ಹತ್ತು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದೆ.

ಖುದ್ದು ಯಡಿಯೂರಪ್ಪನವರೇ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್-ಜೆಡಿಎಸ್‍ನಲ್ಲಿರುವ ಅತೃಪ್ತ ಶಾಸಕರನ್ನು ಸೆಳೆದು ಪಕ್ಷಕ್ಕೆ ಕರೆತರುವ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಅಖಾಡಕ್ಕಿಳಿದಿರುವ ಜಾರಕಿಹೊಳಿ ಭಿನ್ನಮತೀಯರನ್ನು ಸೆಳೆಯಲು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪನವರಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅತೃಪ್ತರ ಜೊತೆ ಸಭೆ ನಡೆಸಿ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ