ಬೆಂಗಳೂರು, ಮೇ 24- ಲೋಕಸಭೆ ಚುನಾವಣೆಯ ಸೋಲಿನ ಹಿನ್ನಲೆಯಲ್ಲಿ ಮೈತ್ರಿ ಸರ್ಕಾರವನ್ನು ಸ್ಥಿರವಾಗಿ ಮುನ್ನಡೆಸುವ ಬಗ್ಗೆ ಇಂದು ನಡೆದ ಸಚಿವ ಸಂಪುಟದ ಅನೌಪಚಾರಿಕ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಗೃಹಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆದಿಯಾಗಿ ಸಚಿವರು ಪಾಲ್ಗೊಂಡಿದ್ದ ಸಭೆಯಲ್ಲಿ ಮುಖ್ಯವಾಗಿ ಲೋಕಸಭೆ ಚುನಾವಣೆಯ ಸೋಲಿನ ಪರಾಮರ್ಶೆಯೊಂದಿಗೆ ರಾಜ್ಯದ ಮೈತ್ರಿ ಸರ್ಕಾರವನ್ನು ಮುನ್ನಡೆಸುವ ಕುರಿತಂತೆ ಮಹತ್ವದ ಚರ್ಚೆಯನ್ನು ನಡೆಸಿದರು.
ಆಪರೇಷನ್ ಕಮಲ ಮುಂದುವರೆದರೆ ಆಡಳಿತ ಪಕ್ಷದಲ್ಲಿನ ಅತೃಪ್ತ ಶಾಸಕರು ಆ ಕಡೆಗೆ ವಾಲುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ಉಭಯ ಪಕ್ಷಗಳು ಹೆಚ್ಚು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.ಅತೃಪ್ತರ ಮನವೊಲಿಸಬೇಕು.ನಿನ್ನೆಯ ಸೋಲು ಒಂದು ಪಾಠವೆಂದು ಭಾವಿಸಿ ಮುನ್ನಡೆಯಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ.
ಮುಂದೆ ಬರಬಹುದಾದ ಅಡ್ಡಿ ಆತಂಕಗಳನ್ನು ನಿವಾರಿಸುವುದು ಹೇಗೆ, ಸರ್ಕಾರಕ್ಕೆ ಎದುರಾಗುವ ಸವಾಲುಗಳನ್ನು ಹಿಮ್ಮೆಟ್ಟಿ ಸರ್ಕಾರವನ್ನು ಮುನ್ನಡೆಸುವುದು ನಮ್ಮ ಗುರಿಯಾಗಬೇಕು ಎಂಬ ಬಗ್ಗೆ ಉಭಯ ಪಕ್ಷಗಳ ನಾಯಕರು ಪರಾಮರ್ಶೆ ನಡೆಸಿದರು.
ಸಭೆಗೂ ಮುನ್ನ ಎರಡೂ ಪಕ್ಷಗಳ ಮುಖಂಡರು ಪ್ರತ್ಯೇಕ ಸಭೆಗಳನ್ನು ನಡೆಸಿ ಸೋಲಿನ ಪರಾಮರ್ಶೆ ನಡೆಸಿದ್ದರಲ್ಲದೆ ನಂತರ ಸಭೆಯಲ್ಲೂ ಈ ಬಗ್ಗೆ ಚರ್ಚಿಸಲಾಯಿತು.
ಬಿಜೆಪಿಯನ್ನು ಸೋಲಿಸಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದವು.ಆದರೆ, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ನಡುವೆ ಹೊಂದಾಣಿಕೆಯಾಗದೆ ಭಾರೀ ಸೋಲನ್ನು ಅನುಭವಿಸಲಾಗಿದೆ.ಸೋಲಿಗೆ ಕಾರಣಗಳೇನು ಎಂಬ ಬಗ್ಗೆ ಸಚಿವರೊಂದಿಗೆ ಮುಕ್ತವಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಮಾಲೋಚನೆ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ಆಪರೇಷನ್ ಕಮಲ ನಡೆಸಲಿದೆ ಎಂಬ ಮಾತುಗಳು ಕೇಳಿಬಂದಿದ್ದು, ಆಡಳಿತ ಪಕ್ಷದ ಅತೃಪ್ತ ಶಾಸಕರು ಬಿಜೆಪಿ ಸೇರುವ ವಿಚಾರದ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗಿದೆ.ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವುದನ್ನು ತಡೆಯಲು ಮಾಡಬೇಕಾಗಿರುವ ಕಾರ್ಯತಂತ್ರದ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ಫಲಿತಾಂಶಕ್ಕೂ ಮುನ್ನ ಸಚಿವರಾದ ಪುಟ್ಟರಂಗಶೆಟ್ಟಿ, ಎಂ.ಟಿ.ಬಿ.ನಾಗರಾಜು ಸೇರಿದಂತೆ ಕಾಂಗ್ರೆಸ್ನ ಕೆಲವು ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಉಂಟುಮಾಡಿದ್ದ ಮುಜುಗರದ ವಿಚಾರದ ಬಗ್ಗೆ ಗಂಭೀರ ಚರ್ಚೆ ಮಾಡಿದ್ದು, ಇಂತಹ ವಿಚಾರಗಳು ತಲೆದೋರದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ಧರಿಸಲಾಗಿದೆ.
ಒಂದು ವೇಳೆ ಇಂತಹ ಅನಾವಶ್ಯಕ ವಿಚಾರಗಳು ಚರ್ಚೆಗೆ ಬಂದರೆ ನಾಯಕರು ಅದನ್ನುನಿವಾರಿಸುವ ಕೆಲಸ ಎಂದು ತೀರ್ಮಾನಿಸಲಾಯಿತು. ಇದರೊಂದಿಗೆ ಕಾಂಗ್ರೆಸ್ ಶಾಸಕರಲ್ಲಿ ಉಂಟಾಗಿರುವ ಅಸಮಾಧಾನ ಶಮನಗೊಳಿಸುವುದು, ಮೈತ್ರಿ ಸರ್ಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅಲ್ಲದೆ, ಲೋಕಸಭೆ ಚುನಾವಣೆ ಫಲಿತಾಂಶ ಮೈತ್ರಿ ಪಕ್ಷಗಳಿಗೆ ಮಾರಕವಾಗಿರುವುದರಿಂದ ವಿಧಾನಸಭೆ ವಿಸರ್ಜನೆ ಮಾಡಿ ಮಧ್ಯಂತರ ಚುನಾವಣೆ ಎದುರಿಸುವುದು ಕಷ್ಟ.ಬೇಷರತ್ ಆಗಿ ಬೆಂಬಲ ನೀಡಿ ಮತ್ತೆ ನಾಯಕತ್ವದ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ. ಇಷ್ಟವಿಲ್ಲದಿದ್ದರೆ ಮುಖ್ಯಮಂತ್ರಿ ಸ್ಥಾನವನ್ನೂ ತ್ಯಾಗ ಮಾಡಲು ಸಿದ್ಧ ಎಂಬ ವಿಚಾರವನ್ನು ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಮೈತ್ರಿ ಸರ್ಕಾರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎರಡೂ ಪಕ್ಷಗಳ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ತೀರ್ಮಾನ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.