ಬೆಂಗಳೂರು, ಮೇ 23-ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕಾಂಗ್ರೆಸ್ನವರಾದ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಕೇಂದ್ರದ ಮಾಜಿ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಸಂಸದರಾಗಿದ್ದ ಪ್ರಕಾಶ್ಹುಕ್ಕೇರಿ, ವಿ.ಎಸ್.ಉಗ್ರಪ್ಪ, ಬಿ.ಎನ್.ಚಂದ್ರಪ್ಪ, ಸಚಿವ ಕೃಷ್ಣಭೆರೇಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಘಟಾನುಘಟಿ ನಾಯಕರುಗಳು ಸೋಲಿನ ಕಹಿ ಉಂಡಿದ್ದಾರೆ.
ಸೋಲರಿಯದ ಸರದಾರರೆನಿಸಿಕೊಂಡಿದ್ದ ಮಲ್ಲಿಕಾರ್ಜುನ್ ಖರ್ಗೆ, ಕೆ.ಎಚ್.ಮುನಿಯಪ್ಪ ಅವರು ಇದೇ ಮೊದಲ ಬಾರಿಗೆ ಜನ ಸೋಲಿನ ರುಚಿ ತೋರಿಸಿದ್ದಾರೆ.
ಕರಾರುವಕ್ಕಾದ ಕಾರ್ಯತಂತ್ರ, ಸದೃಢ ಪಕ್ಷ ಸಂಘಟನೆಯಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆಗಿನ ಮೈತ್ರಿಯನ್ನೇ ನಂಬಿಕೊಂಡು ಚುನಾವಣೆ ಎದುರಿಸಿದ್ದರ ಪರಿಣಾಮ ಸೋತು ಹೈರಾಣಾಗಿದೆ.
ಇದೇ ಮೊದಲ ಬಾರಿಗೆ ತವರೂರು ಹಾಸನ ಬಿಟ್ಟು ತುಮಕೂರಿನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡ ಅವರು ಸೋಲು ಕಂಡಿದ್ದು ಮಾತ್ರ ರಾಜ್ಯರಾಜಕಾರಣಕ್ಕೆ ಭಾರೀ ನಷ್ಟ ಉಂಟು ಮಾಡಿದೆ. ಮಾಜಿ ಪ್ರಧಾನಿಯಾಗಿ ದೇವೇಗೌಡರು ಕಾವೇರಿ ಕೃಷ್ಣಾ ಸೇರಿದಂತೆ ಹಲವಾರು ನದಿ ವಿವಾದಗಳಲ್ಲಿ ಮತ್ತು ಭಾಷಾ ಸಂಬಂಧ ಸಮಸ್ಯೆಗಳು ಎದುರಾದಾಗ ಕೇಂದ್ರದ ಮೇಲೆ ಪ್ರಭಾವ ಬೀರುವ ದಕ್ಷತೆ ಹೊಂದಿದ್ದರು. ಬಿಜೆಪಿಯ ಜಿ.ಎಸ್.ಬಸವರಾಜು ಗೆಲ್ಲುವ ಮೂಲಕ ದೇವೇಗೌಡರು ಸೋಲು ಕಂಡಿದ್ದಾರೆ.
ಕಲಬುರಗಿಯಲ್ಲಿ ತಾವೇ ಬೆಳೆಸಿದ ಉಮೇಶ್ ಜಾಧವ್ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ಸೋಲಿನ ರುಚಿ ಅನುಭವಿಸಿದ್ದಾರೆ. ಸತತವಾಗಿ 9 ವಿಧಾನಸಭೆ ಚುನಾವಣೆ, 2 ಲೋಕಸಭೆ ಚುನಾವಣೆ ಸೇರಿದಂತೆ ನಿರಂತರವಾಗಿ ಗೆಲುವನ್ನೇ ದಾಖಲಿಸಿಕೊಂಡು ಬಂದಿದ್ದ ರಾಜಕೀಯ ಜೀವನ ಆರಂಭಿಸಿದ ದಿನದಿಂದಲೂ ಯಾವ ಚುನಾವಣೆಯಲ್ಲೂ ಸೋಲು ಕಂಡಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿ ಎದುರಾಳಿಯಾಗಿದ್ದ ಉಮೇಶ್ ಜಾಧವ್ ವಿರುದ್ಧ ಸೋತಿದ್ದು ಮಾತ್ರ ವಿಪರ್ಯಾಸ.
ಇನ್ನು ಕೆ.ಎಚ್.ಮುನಿಯಪ್ಪ ಅವರಂತೂ ಸತತವಾಗಿ 7 ಲೋಕಸಭೆ ಚುನಾವಣೆಗಳಲ್ಲಿ ಜಯಗಳಿಸಿ 8 ಬಾರಿ ಗೆಲ್ಲುವ ಪ್ರಯತ್ನ ಮಾಡಿ ದಾಖಲೆ ನಿರ್ಮಿಸಲು ಮುಂದಾಗಿದ್ದರು. ಆದರೆ ಬೆಂಗಳೂರಿನಲ್ಲಿ ಬಿಬಿಎಂಪಿ ಸದಸ್ಯರಾಗಿದ್ದ ಮುನಿಸ್ವಾಮಿ ಅವರು ಏಕಾಏಕಿ ಕೋಲಾರ ಚುನಾವಣಾ ಕಣಕ್ಕಿಳಿದು ಮುನಿಯಪ್ಪ ಅವರಿಗೆ ಸೋಲಿಗೆ ರುಚಿ ತೋರಿಸಿದ್ದಾರೆ.
ಕಲಬುರಗಿಯಲ್ಲಿ ಕಾಂಗ್ರೆಸ್ನಲ್ಲಿದ್ದು ಬೇಸರಗೊಂಡು ಹೊರ ಹೋಗಿದ್ದ ಮಾಲಕಯ್ಯ ಗುತ್ತೇದಾರ್, ಎ.ಬಿ.ಮಾಲಕರೆಡ್ಡಿ, ಬಾಬುರಾವ್ ಚಿಂಚನಸೂರ್ ಅವರು ಉಮೇಶ್ ಜಾಧವ್ ಅವರ ಮೂಲಕ ಖರ್ಗೆ ಅವರನ್ನು ಸೋಲಿಸಿದರೆ, ಮುನಿಯಪ್ಪ ಅವರಿಗೆ ಕಾಂಗ್ರೆಸ್ನಲ್ಲೇ ಇರುವ ನಾಯಕರು ಒಳಸಂಚು ಮಾಡಿ ಸೋಲಿಸಿದ್ದಾರೆ.
ಚಿಕ್ಕಬಳ್ಳಾಪುರದ ಅಭ್ಯರ್ಥಿ ಮಾಜಿ ಸಚಿವ ವೀರಪ್ಪ ಮೊಯ್ಲಿ ಅವರಿಗೂಪಕ್ಷದ ಒಳಗಿನ ಹಿತಶತ್ರುಗಳೇ ಮುಳುವಾಗಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಬಿಜೆಪಿಯ ಬಚ್ಚೇಗೌಡ ಅವರಿಗೆ ಈ ಬಾರಿ ಅನುಕಂಪದ ಅಲೆ ಅನುಕೂಲ ಮಾಡಿಕೊಟ್ಟಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಚಿವ ಕೃಷ್ಣಭೆರೇಗೌಡ ಅವರು ಚುನಾವಣೆಯ ಕೊನೆ ದಿನಗಳಲ್ಲಿ ಬದ್ಧತೆಯಿಂದ ಕೆಲಸ ಮಾಡದೆ ತಾವಾಗಿಯೇ ಸೋಲನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ರಾಜ್ಯದ ಯಾವ ಕ್ಷೇತ್ರಗಳಲ್ಲೂ ಕಾಣದಷ್ಟು ಮೈತ್ರಿಯ ಹೊಂದಾಣಿಕೆ ಬೆಂಗಳೂರು ಉತ್ತರದಲ್ಲಿತ್ತು. ಆದರೆ ಕೃಷ್ಣಭೆರೇಗೌಡ ಅದರ ಲಾಭ ಪಡೆಯಲು ವಿಫಲರಾಗಿ ಕೇಂದ್ರ ಸಚಿವ ಸದಾನಂದಗೌಡರು ಮತ್ತೆ ಸಂಸತ್ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.
ದೇಶದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಅಂಬರೀಶ್ ಅವರ ಪತ್ನಿ ಹಾಗೂ ಹಿರಿಯ ನಟಿ ಸುಮಲತಾ ಅವರ ವಿರುದ್ಧ ಸೋಲು ಕಂಡಿದ್ದಾರೆ.
ಈ ಕ್ಷೇತ್ರದಲ್ಲಿ ಸ್ವಾಭಿಮಾನವನ್ನು ಪ್ರತಿಷ್ಠೆಯಾಗಿಟ್ಟುಕೊಂಡು ಚುನಾವಣೆ ನಡೆಸಲಾಗಿತ್ತು. ಹಳ್ಳಿ ಹಳ್ಳಿಗಳಲ್ಲಿ ಜನ ಸ್ವಪ್ರೇರಣೆಯಿಂದ ಸುಮಲತಾ ಅವರನ್ನು ಬೆಂಬಲಿಸಿದರು. ಜೆಡಿಎಸ್ನ ಭದ್ರಕೋಟೆ ಎಂದು ಭಾವಿಸಲಾಗಿದ್ದ ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಸುಮಲತಾ ಗೆಲ್ಲುವ ಮೂಲಕ ಜೆಡಿಎಸ್ ವರಿಷ್ಠರಿಗೆ ಬಿಸಿ ಮುಟ್ಟಿಸಿದ್ದಾರೆ.
ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಾಜಾ ಅಮರೇಶ್ನಾಯಕ್, ಕಾಂಗ್ರೆಸ್ನ ಸಂಸದರಾಗಿದ್ದ ಬಿ.ವಿ.ನಾಯಕ್ ಅವರನ್ನು ಸೋಲಿಸಿದ್ದಾರೆ.
ಚಿಕ್ಕೋಡಿಯಲ್ಲಿ ಸಂಸದರಾಗಿದ್ದ ಪ್ರಕಾಶ್ ಹುಕ್ಕೇರಿ ಅವರನ್ನು ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಸೋಲಿಸಿದ್ದಾರೆ. ಬಳ್ಳಾರಿಯ ಉಪಚುನಾವಣೆಯಲ್ಲಿ ಗೆದ್ದು ಒಂದು ವರ್ಷಗಳ ಕಾಲ ಸಂಸದರಾಗಿದ್ದ ವಿ.ಎಸ್.ಉಗ್ರಪ್ಪ ಅವರು ಬಿಜೆಪಿಯ ದೇವೇಂದ್ರಪ್ಪ ವಿರುದ್ಧ, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಸಂಸದರಾಗಿದ್ದ ಬಿ.ಎನ್.ಚಂದ್ರಪ್ಪ ಅವರು, ಆನೇಕಲ್ನಿಂದ ಹೋಗಿ ಸ್ಪರ್ಧಿಸಿದ್ದ ಮಾಜಿ ಸಚಿವ ನಾರಾಯಣಸ್ವಾಮಿ ವಿರುದ್ಧ ಸೋಲು ಕಂಡಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿದ್ದ ಕಾಂಗ್ರೆಸ್ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನು ಕಣಕ್ಕಿಳಿಸಿತ್ತು. ಆದರೆ ಖಂಡ್ರೆ ಅವರು ಅರಳುವ ಕಮಲದ ಎದುರು ಕಮರಿಹೋಗಿದ್ದಾರೆ.