ಕೋಲ್ಕತ, ಮೇ. 22-ಲೋಕಸಭಾ ಚುನಾವಣೆಯ ಎಲ್ಲ 7 ಹಂತಗಳಲ್ಲೂ ವ್ಯಾಪಕ ಗಲಭೆ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾದ ಪಶ್ಚಿಮ ಬಂಗಾಳದಲ್ಲಿ ನಾಳೆ ನಡೆಯಲಿರುವ ಮತ ಎಣಿಕೆ ಸಂದರ್ಭದಲ್ಲೂ ಘರ್ಷಣೆಗಳು ಭುಗಿಲೆಳುವ ಸಾಧ್ಯತೆ ಇದೆ.
ಈ ಕುರಿತು ಗುಪ್ತಚರ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ರಾಜಧಾನಿ ಕೋಲ್ಕತ್ತಾ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಅಭೂತ ಪೂರ್ವ ಬಿಗಿ ಭದ್ರತೆ ಮಾಡಲಾಗಿದೆ.
ಕೋಲ್ಕತಾದ 13ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು, 4ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ ಎಣಿಕೆ ಕೇಂದ್ರಗಳ ಒಳಗೆ ಹೆಚ್ಚಿನ ಭದ್ರತೆಗಾಗಿ ಕೇಂದ್ರಿಯ ಪಡೆಗಳನ್ನು ಪಹರೆ ಹಾಕಲಾಗಿದೆ.
ಚುನಾವಣೆಯ ಎಲ್ಲಾ ಹಂತಗಳ ಪ್ರಚಾರ ಮತ್ತು ಮತದಾನದ ವೇಳೆ ರಾಜ್ಯದ ಬಹುತೇಕ ಕಡೆ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾರೀ ಘರ್ಷಣೆ ಮತ್ತು ಹಿಂಸಾಚಾರ ನಡೆದು ಅನೇಕರು ಗಾಯಗೊಂಡಿದ್ದು, ಉಭಯ ಪಕ್ಷಗಳ ಸಂಸದರ ಮೇಲೂ ಹಲ್ಲೆಗಳೂ ನಡೆದಿದ್ದವು.
ಕೊನೆಯ ಹಂತದ ಚುನಾವಣಾ ಪ್ರಚಾರದ ವೇಳೆ ಕೋಲ್ಕತ್ತಾದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಡೆಸಿದ ರೋಡ್ ಷೋ ವೇಳೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಅನೇಕರು ಗಾಯಗೊಂಡರು. ಉದ್ರಿಕ್ತ ಗುಂಪಿನ ಹಿಂಸಾಚಾರಕ್ಕೆ ಸಾರ್ವಜನಿಕ ಆಸ್ತಿಪಾಸ್ತಿಗಳು ಜಖಂಗೊಂಡು, ದ್ವಿಚಕ್ರವಾಹನಗಳು ಬೆಂಕಿಗಾಹುತಿ ಆದವು. ಅಲ್ಲದೆ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಸಹ ಗಲಭೆಕೋರರು ಧ್ವಂಸಗೊಳಿಸಿದ್ದರು.
ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಣ ದ್ವೇಷ ಬೂದಿ ಮುಂಚಿ ಕೆಂಡದಂತಿದ್ದು ನಾಳೆ ಮತ ಎಣಿಕೆ ಸಂದರ್ಭದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಯಿದ್ದು, ಹಿಂಸಾಚಾರ ತಡೆಯಲು ಪೊಲೀಸರು ಮತ್ತು ಯೋಧರು ಜಂಟಿ ಪಡೆ ಕಟ್ಟೆಚ್ಚರ ವಹಿಸಿವೆ.